ಜನರ ನಂಬಿಕೆಯೇ ನ್ಯಾಯಾಂಗದ ಬಹುದೊಡ್ಡ ಶಕ್ತಿ : ನ್ಯಾ.ಎನ್ ವಿ ರಮಣ

ನವದೆಹಲಿ:

    ಜನರ ನಂಬಿಕೆಯೇ ನ್ಯಾಯಾಂಗದ ಬಹುದೊಡ್ಡ ಶಕ್ತಿಯಾಗಿದ್ದು, ನ್ಯಾಯಾಧೀಶರು ಎಲ್ಲಾ ಒತ್ತಡ ಮತ್ತು ಅಡೆತಡೆಗಳನ್ನು ನಿವಾರಿಸಿಕೊಂಡು ತಮ್ಮ ತತ್ವಗಳನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವುದು ಮತ್ತು ನಿರ್ಭೀತಿಯಿಂದ ನಿರ್ಣಯ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ಎನ್ ವಿ ರಮಣ ಹೇಳಿದ್ದಾರೆ.

    ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆಗೆ ಪತ್ರ ಬರೆದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ನ್ಯಾಯಮೂರ್ತಿ ಎನ್ ವಿ ರಮಣ ವಿರುದ್ಧ ಆರೋಪ ಮಾಡಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈ ಸಂದರ್ಭದಲ್ಲಿ ಜಸ್ಟೀಸ್ ರಮಣ ಈ ಹೇಳಿಕೆ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎ ಆರ್ ಲಕ್ಷ್ಮಣನ್ ಅವರು ಕಳೆದ ಆಗಸ್ಟ್ 27ರಂದು ಮೃತಪಟ್ಟಿದ್ದು ಅವರ ಸಂತಾಪ ಸಭೆಯಲ್ಲಿ ನಿನ್ನೆ ಮಾತನಾಡಿದ ನ್ಯಾಯಮೂರ್ತಿ ರಮಣ, ಜನರು ನಂಬಿಕೆಯನ್ನು ಉಳಿಸಿಕೊಂಡಿರುವುದು ಮತ್ತು ಇರಿಸಿಕೊಂಡಿರುವುದೇ ನ್ಯಾಯಾಂಗ ವ್ಯವಸ್ಥೆಯ ಅತಿದೊಡ್ಡ ಶಕ್ತಿ. ನಂಬಿಕೆ, ಆತ್ಮವಿಶ್ವಾಸ ಮತ್ತು ಸ್ವೀಕಾರಾರ್ಹತೆಯನ್ನು ಆಜ್ಞಾಪಿಸಿ, ಒತ್ತಾಯಪೂರ್ವಕವಾಗಿ ಪಡೆದುಕೊಳ್ಳಲಾಗುವುದಿಲ್ಲ, ಅವುಗಳನ್ನು ನಾವು ಗಳಿಸಬೇಕಾಗುತ್ತದೆ ಎಂದರು.

    ಒಬ್ಬ ವ್ಯಕ್ತಿ ಉತ್ತಮ ಜೀವನ ನಡೆಸಲು ಹಲವು ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ, ನಮ್ರತೆ, ತಾಳ್ಮೆ, ದಯೆ,ಕೆಲಸದ ಮೇಲೆ ನಂಬಿಕೆ, ಶ್ರದ್ಧೆ ಮತ್ತು ನಿರಂತರವಾಗಿ ತನ್ನನ್ನು ತಾನು ಕಲಿಯಲು ಮತ್ತು ಸುಧಾರಿಸಿಕೊಳ್ಳಲು ಉತ್ಸಾಹ ತೋರಿಸಬೇಕಾಗುತ್ತದೆ ಎಂದು ಕೂಡ ಜಸ್ಟೀಸ್ ರಮಣ ಹೇಳಿದ್ದಾರೆ.

    ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಧೀಶನಾದವನಿಗೆ ತಮ್ಮ ತತ್ವಗಳನ್ನು ನಿರಂತರವಾಗಿ ಹಿಡಿದಿಟ್ಟುಕೊಳ್ಳಬೇಕು ಮತ್ತು ನಿರ್ಭೀತಿಯಿಂದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ.ಎಲ್ಲಾ ಒತ್ತಡ, ಅಡೆತಡೆಗಳನ್ನು ನಿವಾರಿಸಿಕೊಂಡು ಧೈರ್ಯವಾಗಿ ನಿಲ್ಲುವುದು ಒಬ್ಬ ನ್ಯಾಯಾಧೀಶನಿಗಿರಬೇಕಾದ ಪ್ರಮುಖ ಅರ್ಹತೆ ಎಂದು ಹೇಳಿದರು.

    ಜಸ್ಟೀಸ್ ಲಕ್ಷ್ಮಣನ್ ಅವರನ್ನು ನೆನಪು ಮಾಡಿಕೊಂಡ ನ್ಯಾಯಮೂರ್ತಿ ರಮಣ, ನಾವೆಲ್ಲರೂ ಅವರ ಮಾತುಗಳಿಂದ ಪ್ರೇರಣೆ ಪಡೆದುಕೊಂಡು ಇಂದಿನ ಕಾಲಕ್ಕೆ ಅಗತ್ಯವಿರುವ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಲು ಪ್ರಯತ್ನಿಸಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap