ಭಾರತೀಯರಲ್ಲಿ ರೋಗನಿರೋಧಕ ಶಕ್ತಿ (ರೋ.ಶ.) ಗಟ್ಟಿ ಇದೆ;
ಈ ದೇಶದ ಉಷ್ಣಾಂಶವೂ ವೈರಾಣುವನ್ನು ಹಿಮ್ಮೆಟ್ಟಿಸುವಂತಿದೆ. ಆದರೆ ಮಾಧ್ಯಮಗಳ ಡೋಲು ತಮಟೆಯಿಂದಾಗಿ ನಮ್ಮ ರೋ.ಶ. ತಗ್ಗುವ, ನಾವು ಸೋಲುವ ಸಾಧ್ಯತೆ ಹೆಚ್ಚುತ್ತಿದೆ. ಈ ಕುರಿತು ತುಸು ಉದ್ದನ್ನ ಆದರೆ ಸರಳವಾದ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿದೆ:
ದೇಹವೆಂಬ ಈ ಭದ್ರಕೋಟೆ ಗಟ್ಟಿಯಾಗಿದ್ದರೆ ಕೊರೊನಾ ವೈರಸ್ಸನ್ನು ಸುಲಭವಾಗಿ ಮಣಿಸಬಹುದು. ಇಳಿವಯಸ್ಸಿನಲ್ಲಿ ರೋಗನಿರೋಧಕ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ಕಡಿಮೆಯಾಗುತ್ತದೆ ಎಂಬುದೇನೋ ನಿಜ. ಆದರೆ ಇಲ್ಲೊಂದು ಸ್ವಾರಸ್ಯ ಇದೆ. ನಮ್ಮ ವಯಸ್ಸಿಗೂ ರೋಗನಿರೋಧಕತೆಗೂ ಅಷ್ಟೇನೂ ನೇರ ಸಂಬಂಧ ಇಲ್ಲ. ನಿಮ್ಮ ವಯಸ್ಸು 45 ಇದ್ದರೆ ನಿಮ್ಮ ರೋಗನಿರೋಧಕ ವ್ಯವಸ್ಥೆಗೆ 60 ವರ್ಷ ಆಗಿರಬಹುದು. ಅಥವಾ ಅದು 25ರ ಯೌವನದಲ್ಲಿರಬಹುದು.
ನಮ್ಮ ದೇಹದ ಎಲ್ಲ ಅಂಗಾಂಗಗಳೂ ಅಷ್ಟೆ. ನಿಮಗೆ 45 ವರ್ಷ ಆಗಿದ್ದರೆ ನಿಮ್ಮ ಕಣ್ಣಿಗೆ 55 ಅಥವಾ 35 ಆಗಿರಬಹುದು. ನಿಮ್ಮ ಕೂದಲಿಗೆ 55 ವರ್ಷ ಆಗಿರಬಹುದು; ನಿಮ್ಮ ಕಿವಿಗೆ 40 ಮತ್ತು ದಂತಪಂಕ್ತಿಗೆ 35 ಆಗಿರಬಹುದು (ಈ ವಿಲಕ್ಷಣತೆಯ ಕುರಿತು ಅಂಕಿತ ಪುಸ್ತಕ ಪ್ರಕಟಿಸಿದ ‘ನಮ್ಮೊಳಗಿನ ಬ್ರಹ್ಮಾಂಡ’ ಎಂಬ ನನ್ನ ಪುಸ್ತಕದಲ್ಲಿ ವಿಸ್ತೃತ ಲೇಖನ ಇದೆ).
ಈ ನಮ್ಮ ರೋಗನಿರೋಧಕ ಶಕ್ತಿಯ ಲಕ್ಷಣಗಳೇನು?
ಎಲ್ಲರ ದೇಹದಲ್ಲೂ ಎರಡು ಬಗೆಯ ರೋಗನಿರೋಧಕ ಶಕ್ತಿ (ರೋ.ಶ.) ಇರುತ್ತದೆ.
(1) ಜನ್ಮತಃ ಬಂದಿರುವುದು. ನಾವು ಮಗುವಾಗಿದ್ದಾಗಲಿಂದ ಮ್ಯಾಕ್ರೊಫೇಜ್ ಮತ್ತು ನ್ಯೂಟ್ರೊಫಿಲ್ಸ್ ಹೆಸರಿನ ಕೋಶಗಳು ರಕ್ತದಲ್ಲಿ ಓಡಾಡುತ್ತಿರುತ್ತವೆ. ದೇಹದಲ್ಲಿ ರೋಗಾಣುಗಳು ಹೊಕ್ಕರೆ ಇದು ತಕ್ಷಣವೇ ದಾಳಿ ಮಾಡಲು ಸಜ್ಜಾಗಿರುತ್ತದೆ.
(2) ಸಾಂದರ್ಭಿಕ ವ್ಯವಸ್ಥೆ: ದಾಳಿಗೆ ಬಂದ ರೋಗಾಣುವಿನ ಗುರುತು ಚೆಹರೆಯನ್ನು ಸರಿಯಾಗಿ ನೋಡಿ, ಅದರ ಶಸ್ತ್ರಾಸ್ತ್ರಗಳ ಅಧ್ಯಯನ ಮಾಡಿ, ಅದನ್ನು ಮಣಿಸಬಲ್ಲ ಪ್ರತ್ಯಸ್ತ್ರಗಳನ್ನು ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಇಳಿಯುತ್ತದೆ. ಕೌರವ ಗದೆಯನ್ನು ಹೊತ್ತಿದ್ದರಿಂದಲೇ ಗದೆ ಹಿಡಿದ ಭೀಮನನ್ನೇ ಯುದ್ಧಕ್ಕೆ ಇಳಿಸಿದ್ದನಲ್ಲ ಆ ಕೃಷ್ಣ? ಹಾಗೇ ಇದು. ಆದರೆ ಈ ರೋ.ಶ. ತಕ್ಷಣಕ್ಕೆ ಪ್ರಕಟ ಆಗುವುದಿಲ್ಲ. ಸೂಕ್ತ ವೇಷ ಧರಿಸಿ ರಂಗಕ್ಕೆ ಬರಲು ತುಸು ಸಮಯ ಬೇಕು ತಾನೆ? ರಕ್ತದಲ್ಲಿ ಖಿ ಕೋಶ, ಃ ಕೋಶ ಹಾಗೂ ಪ್ರತಿಕಾಯಗಳು (ಆಂಟಿಬಾಡೀಸ್) ಹೀಗೆ ಹೊಸದಾಗಿ ಸೃಷ್ಟಿಯಾಗಿ ಯುದ್ಧಕ್ಕೆ ಇಳಿಯುತ್ತವೆ.
ಒಮ್ಮೆ ಇವು ವೇಷ ಧರಿಸಲು ಕಲಿತರೆ ನಮ್ಮ ದೇಹ ಅದನ್ನು ಎಂದೂ ಮರೆಯುವುದಿಲ್ಲ. ಮಮ್ಸ್ ಅಥವಾ ದಢಾರದ ರೋಗಾಣುಗಳ ವಿರುದ್ಧ ಶಸ್ತ್ರಾಸ್ತ್ರ ಸಜ್ಜಾಗಿ, ಬಾಲ್ಯದಲ್ಲಿ ಈ ರೋಗಗಳನ್ನು ಮಣಿಸಿದ್ದೇ ಆದರೆ ಮುಂದೆ ಎಂದೂ ಈ ರೋಗಗಳು ಬಾರದಂತೆ ದೇಹ ಅದೇ ಶಸ್ತ್ರಾಸ್ತ್ರವನ್ನು ಶೀಘ್ರದಲ್ಲೇ ಹಿಡಿದು ನಿಲ್ಲುತ್ತದೆ. ಹಾಗೆಂದು ಹೆದರಬೇಕಿಲ್ಲ. ಬಹುಪಾಲು ಜನರಲ್ಲಿ ಹುಟ್ಟಿದಾಗಿನಿಂದ ಬಂದ ರೋ.ಶ. ಸಾಕಷ್ಟು ಗಟ್ಟಿಯಾಗಿಯೇ ಇರುತ್ತದೆ. ಕೋವಿಡ್-19 ಕಾಯಿಲೆ ಬಂದವರಲ್ಲಿ ಅರ್ಧಕ್ಕರ್ಧ ಜನಕ್ಕೆ ಕಾಯಿಲೆಯ ಲಕ್ಷಣಗಳು ಎದ್ದುಕಾಣುವ ಮೊದಲೇ ರೋಗಾಣು ನಿರ್ನಾಮ ಆಗಿರುತ್ತದೆ.
ಇನ್ನು ಕೆಲವಷ್ಟು ಜನರು ಒಣಕೆಮ್ಮು, ಜ್ವರದಿಂದ ನಾಲ್ಕಾರು ದಿನ ಫಜೀತಿಪಟ್ಟರೂ ಅವರು ಆಸ್ಪತ್ರೆಗೆ ಧಾವಿಸಬೇಕಾಗಿಲ್ಲ. ನಾರು, ಬೇರು, ಶುಂಠಿ- ಅಮೃತಬಳ್ಳಿ ಕಷಾಯ, ಬೆಚ್ಚಗಿನ ಉಪ್ಪುನೀರಲ್ಲಿ ಬಾಯಿ ಮುಕ್ಕಳಿಸುವುದೇ ಮುಂತಾದ ಮನೆಮದ್ದು ಮಾಡಿಸಿಕೊಳ್ಳುತ್ತ ವಿಶ್ರಾಂತ ಸ್ಥಿತಿಯಲ್ಲಿದ್ದರೆ ಸಾಕು. ಆಂಟಿಬಯಾಟಿಕ್ಸ್ (ಜೀವಿರೋಧಕ ಮಾತ್ರೆ) ಕೂಡ ಬೇಕಾಗುವುದಿಲ್ಲ. ಇನ್ನು ಮೂರನೆಯ ಕೆಟೆಗರಿಯವರು ಆಸ್ಪತ್ರೆಗೆ ಹೋಗಿ ಔಷಧಗಳ ಸಾಗರದಲ್ಲಿ ಮಿಂದೆದ್ದು ನಿಂತು ಗುಣಮುಖರಾಗಿ ಬರುತ್ತಾರೆ.
ತೀರ ಅಪರೂಪಕ್ಕೆ ನೂರರಲ್ಲಿ ಒಬ್ಬಿಬ್ಬರಿಗೆ (ಮಾತ್ರ) ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು, ಉಸಿರಾಟವೂ ಕಷ್ಟವಾಗಿ, ಕೃತಕ ಉಸಿರಾಟದ ವೆಂಟಿಲೇಟರ್ ಹಾಕಿಸಿಕೊಳ್ಳಬೇಕಾಗುತ್ತದೆ.
ಅವರ ವಿಷಯ ಕೊಂಚ ಕಷ್ಟ. ಅಂಥವರಲ್ಲಿ ರೋ.ಶ. ದುರ್ಬಲವಾಗಿರುತ್ತದೆ. ಒಂದೋ ಅವರು ತೀರ ಇಳಿವಯಸ್ಸಿನವರಾಗಿ, ಸಂಸಾರಬಂಧನವನ್ನು ಕಳಚಿಕೊಳ್ಳಲು ಸಿದ್ಧರಾಗಿರಬಹುದು. ಅಥವಾ ಕಿರಿ ವಯಸ್ಸಿನವರಾಗಿದ್ದರೂ ಅವರ ರೋ.ಶ.ಕ್ಕೆ ಜಾಸ್ತಿ ವಯಸ್ಸಾಗಿರಬಹುದು. ಅಂದರೆ, ಈಗಾಗಲೇ ಸ್ಥೂಲ ದೇಹಿಗಳಾಗಿ, ಇಲ್ಲವೆ ಸಕ್ಕರೆ ರೋಗಿಗಳಾಗಿ, ಅಥವಾ ಹೃದಯಸಂಬಂಧೀ ಕಾಯಿಲೆಯವರಾಗಿ ಅಥವಾ ಬೀಡಿ-ಸಿಗರೇಟು ಚಟದಿಂದಾಗಿ ಅವರ ಶ್ವಾಸಕೋಶ ಸಾಕಷ್ಟು ಆಗಲೇ ಸುಸ್ತಾಗಿರಬಹುದು. ಅಂಥವರು ಹುಷಾರಾಗಿರಬೇಕು.
ಹಾಗೆಂದು ಕೊರೊನಾ ಬಂತೆಂದು ಅವರೂ ತೀರ ಗಾಬರಿ ಪಡಬೇಕಿಲ್ಲ. ಫ್ರಾನ್ಸಿನ ಪಾಶ್ಚರ್ ಸಂಶೋಧನಾ ಸಂಸ್ಥೆಯ ತಜ್ಞರ 2018ರ ಅಧ್ಯಯನದ ಪ್ರಕಾರ, ಚಿಕ್ಕಂದಿನಿಂದ ನಾನಾ ಬಗೆಯ ವೈರಾಣು, ಬ್ಯಾಕ್ಟೀರಿಯಾ, ಜಂತುಹುಳುವಿನ ಬಾಧೆಯನ್ನು ಎದುರಿಸಿದ ದೇಹದಲ್ಲಿ ಸಾಕಷ್ಟು ಬಗೆಯ ಶಸ್ತ್ರಾಸ್ತ್ರಗಳು ಜಮಾ ಆಗಿರುತ್ತವೆ. ಒಂದಲ್ಲ ಒಂದು ಶಸ್ತ್ರದಿಂದ ಕೊರೊನಾ ಕೂಡ ಹಿಮ್ಮೆಟ್ಟಬಹುದು. ಆದರೆ ಬಾಲ್ಯದಿಂದಲೂ ತೀರ ಶುಚಿಯಾದ ನೀರು, ತೀರ ಶುದ್ಧಾತಿಶುದ್ಧ ಆಹಾರ ಸೇವಿಸುತ್ತ ಶುದ್ಧೋದನನ ಅರಮನೆಯ ಮಕ್ಕಳಂತೆ ಬೆಳೆದಿದ್ದರೆ ಅಂಥವರ ದೇಹದಲ್ಲಿ ರೋಗನಿರೋಧಕ ಶಸ್ತ್ರಾಸ್ತ್ರಗಳ ಸಂಖ್ಯೆ ಕಡಿಮೆ ಇರುತ್ತದೆ.
(ಯುರೋಪ್ ಅಮೆರಿಕದಲ್ಲಿ ಎಷ್ಟೆಲ್ಲ ಜನರನ್ನು ಕೋವಿಡ್ ಕೊಲ್ಲುತ್ತಿದೆ.) ಇದೀಗ ಬಂದ ಮಾಹಿತಿಯ ಪ್ರಕಾರ, ಬಾಲ್ಯದಲ್ಲಿ ಕ್ಷಯನಿರೋಧಕ ಬಿಸಿಜಿ ಚುಚ್ಚುಮದ್ದನ್ನು ಹಾಕಿಸಿಕೊಂಡಿದ್ದರೆ ಅಂಥವರಿಗೆ ಕೊರೊನಾ ಅಷ್ಟಾಗಿ ಬಾಧಿಸುವುದಿಲ್ಲವಂತೆ. ಭಾರತ, ಜಪಾನ್ ಮುಂತಾದ ಕೆಲವೇ ದೇಶಗಳಲ್ಲಿ ಹಿಂದೆಲ್ಲ ಬಿಸಿಜಿ ಕಡ್ಡಾಯವಾಗಿತ್ತು. ಇಂಥ ದೇಶಗಳಲ್ಲಿ ಕೊರೊನಾ ಕುಣಿದಾಟ ಇದುವರೆಗೆ ಕಡಿಮೆ ಇದೆ.
ಇವೆಲ್ಲಕ್ಕಿಂತ ಮುಖ್ಯವಾಗಿ ರೋ.ಶ. ನಮ್ಮನಮ್ಮ ಜೀನ್ಸ್ ಅಂದರೆ ರಕ್ತಗುಣದಲ್ಲಿ ಬಂದಿರುತ್ತದೆ. ನಮ್ಮ ತಾತ, ಮುತ್ತಜ್ಜಿಯರು ಎಷ್ಟೆಷ್ಟು ಬಗೆಯ ರೋಗಗಳನ್ನು ಎದುರಿಸಿ ಬದುಕಿದ್ದರಿಂದಲೇ ನಾವು ಇಂದು ಇಲ್ಲಿದ್ದೇವೆ. ಯುರೋಪ್ ಅಮೆರಿಕದಂತಹ ಚಳಿಪ್ರದೇಶಗಳಲ್ಲಿ ಹಿಂದಿನ ಕಾಲದಲ್ಲೂ ರೋಗಾಣುಗಳ ಸಂಖ್ಯೆ ತೀರ ಕಮ್ಮಿ ಇತ್ತು. ಹಿಮಪ್ರದೇಶಗಳಲ್ಲಿ ಸೊಳ್ಳೆ ಕೂಡ ಇರುವುದಿಲ್ಲ. ಹಾಗಾಗಿ ಅವರ ವಂಶಗುಣದಲ್ಲಿ ರೋ.ಶ. ಸಹಜವಾಗಿ ಕಡಿಮೆ ಇತ್ತು. ಆದ್ದರಿಂದಲೇ ಪ್ಲೇಗು, ಸಿಡುಬಿನಂಥ ಕಾಯಿಲೆಗಳು ಬಂದೆರಗಿದಾಗ ಅಲ್ಲಿಯ ಜನರು ಅಕ್ಷರಶಃ ಹುಳಗಳಂತೆ ಸಾಯುತ್ತಿದ್ದರು.
ಈಗಲೂ ಸಾಮಾನ್ಯ ನೆಗಡಿ ಜ್ವರಕ್ಕೇ ಅಮೆರಿಕದಲ್ಲಿ ದಿನಕ್ಕೆ ಸರಾಸರಿ ನೂರು ಜನರು (ಹೌದು, ಪ್ರತಿದಿನಕ್ಕೆ ನೂರು; ವರ್ಷಕ್ಕೆ 36 ಸಾವಿರ ಜನರು) ಸಾಯುತ್ತಾರೆ. ಅದಕ್ಕೆ ಲಸಿಕೆ ಪಸಿಕೆ,ನೂರೊಂದು ಔಷಧಗಳು ಇದ್ದರೂ ಫ್ಲೂ ರೋಗಾಣು ಅಷ್ಟೊಂದು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅವರ ದುರದೃಷ್ಟಕ್ಕೆ ಈಗಿನ ಈ ಕೊರೊನಾ ಕೂಡ ಚಳಿಮಂಜಿನ ದಿನಗಳಲ್ಲಿ (ಉಷ್ಣತೆ 7ರಿಂದ 25 ಡಿಗ್ರಿ ಸೆ. ಇದ್ದಲ್ಲಿ) ತುಂಬ ಉಗ್ರವಾಗಿರುತ್ತದೆ.
ವೈರಾಣುಗಳು ಪಬ್‌ಗಳಲ್ಲಿ, ಸೂಪರ್ ಬಝಾರ್‌ಗಳಲ್ಲಿ ಬಾಗಿಲ ಹಿಡಿಕೆಗಳ ಮೇಲೆ, ಎಸ್ಕಲೇಟರಿನ ಜಾರುಪಟ್ಟಿಯ ಮೇಲೆ, ಲಿಫ್ಟ್ ಎಂಬ ಏರುಬಂಡಿಯಲ್ಲಿರುವ ಬಟನ್‌ಗಳ ಮೇಲೆ ಹೆಚ್ಚಿನ ಅವಧಿಯಲ್ಲಿ ಜೀವಂತವಾಗಿ ಕೂತಿರುತ್ತವೆ. ಪಾರ್ಕಿನಲ್ಲಿ, ಫುಟ್‌ಪಾತ್ ನಲ್ಲಿ, ರೈಲಿನಲ್ಲಿ, ಲಿಫ್ಟ್‌ನಲ್ಲಿ ಆಲಿಂಗನ, ಚುಂಬನ ಇದ್ದಲ್ಲಂತೂ ವೈರಾಣುವಿಗೆ ಮಜವೋ ಮಜ!
ನಮ್ಮ ದೇಹ, ನಮ್ಮ ದೇಶ ಎರಡೂ ಗಟ್ಟಿಮುಟ್ಟಾಗಿದೆ. ಇಲ್ಲಿ ಬೇಸಿಗೆ ಉಗ್ರವಾಗಿದೆ, ವೈರಾಣುವಿನ ಉಗ್ರತೆಯನ್ನು ಗಾಳಿಯೇ ಕಮ್ಮಿ ಮಾಡಿರುತ್ತದೆ. ಜೊತೆಗೆ ಇಲ್ಲಿನ ಹತ್ತಾರು, ಅಷ್ಟೇಕೆ ನೂರಾರು ಬಗೆಯ ರೋಗಾಣುಗಳ ಸಂತೆಯನ್ನೇ ನೋಡಿ ಕೊರೊನಾ ಇನ್ನಷ್ಟು ನರ್ವಸ್ ಆಗಲೂ ಬಹುದು. ಆ ಸಂತೆಯಲ್ಲಿ ಓಡಾಡುತ್ತ ನಾವು ನಮ್ಮ ದೇಹದಲ್ಲಿ ಎಷ್ಟೊಂದು ರೋ.ಶ. ಶಸ್ತ್ರಾಸ್ತ್ರಗಳನ್ನು ಪೇರಿಸಿಕೊಂಡಿದ್ದೇವೆ. ಅಮೆರಿಕದಲ್ಲಿ ಫ್ಲೂ ರೋಗದಿಂದ ಸಾಯುವವರ ಸಂಖ್ಯೆಯನ್ನು ನೆನಪಿಸಿಕೊಳ್ಳಿ. ನಾವೂ ವರ್ಷಕ್ಕೆ ಎಷ್ಟೊಂದು ಬಾರಿ ಫ್ಲೂ-ನೆಗಡಿ ಎದುರಿಸುವುದಿಲ್ಲ? ನಮ್ಮಲ್ಲಿ ನೆಗಡಿಜ್ವರದ ಸಾವಿನ ಸಂಖ್ಯೆ ಅಮೆರಿಕದ ಹತ್ತರಲ್ಲೊಂದು ಪಾಲೂ ಇಲ್ಲ.
ಆದರೂ ನಾವು ಎಚ್ಚರದಿಂದಿರಬೇಕು. ಯಾಕೆ ಗೊತ್ತೆ? ನಮ್ಮೊಳಗಿನ ರೋ.ಶ.ಕ್ಕೆ ಒಂದು ಸಣ್ಣ ದೌರ್ಬಲ್ಯವೂ ಇದೆ. ನಮ್ಮ ಮನಸ್ಸು ಅಧೀರವಾದರೆ, ನಾವು ಧೈರ್ಯಗುಂದಿದರೆ ಈ ರೋ.ಶ. ಕೂಡ ನರ್ವಸ್ ಆಗುತ್ತದೆ. ಬೇಕಿದ್ದರೆ ಯಾವುದೇ ಮನೋವಿಜ್ಞಾನಿಗಳನ್ನು ಕೇಳಿ ನೋಡಿ. ಮನೋಬಲಕ್ಕೂ ದೇಹಬಲಕ್ಕೂ ನೇರಸಂಬಂಧ ಇದೆ.
ಮಾಧ್ಯಮಗಳ ಈ ಬಗೆಯ ಡೋಲು ತಮಟೆಯ ಅಬ್ಬರದಿಂದಾಗಿ ನಮ್ಮ ಆತ್ಮವಿಶ್ವಾಸ, ನಮ್ಮ ರೋಗನಿರೋಧಕ ಶಕ್ತಿ ಕೂಡ ಕುಂದಬಹುದು. ಟಿವಿ ನೋಡುತ್ತ ಕೂತಂತೆ ಗಂಟಲಲ್ಲಿ ಸಣ್ಣ ಕೆರೆತವೂ ದೊಡ್ಡದಾಗಿ, ಸಣ್ಣ ಆಕ್ಷೀ ಕೂಡ ದೊಡ್ಡ ಸೀನನ್ನೇ ಸೃಷ್ಟಿ ಮಾಡಿ ನಮ್ಮನ್ನು ಮತ್ತು ಇಡೀ ಕುಟುಂಬವನ್ನು ತಬ್ಬಿಬ್ಬು ಮಾಡುತ್ತದೆ. ನಮ್ಮೊಳಗಿನ ರೋ.ಶ. ‘’ತೋಳ ಬಂತಲೇ ತೋಳ’’ದ ಕತೆಯಂತೆ ಮತ್ತೆ ಮತ್ತೆ ಧಿಗ್ಗನೆದ್ದು ಮತ್ತೆ ಮತ್ತೆ ಹೈರಾಣಾಗಿ ಮುದುಡುತ್ತದೆ.
ಅಷ್ಟೇ ಅಲ್ಲ, ಕಣ್ಣಿಗೆ ರಾಚುವ ಪ್ರತಿಯೊಂದು ಮುಖವಾಡವೂ ಕೊರೊನಾವನ್ನು ಸಂಕೇತಿಸುತ್ತದೆ. ಸಮಾಜದಲ್ಲಿ ಮುಗುಳ್ನಗೆಯೇ ಮರೆತಂತಾಗಿದೆ. ಭಯ, ಅಧೀರತೆ ಎಲ್ಲೆಲ್ಲೂ ತಾಂಡವವಾಡತೊಗಿದೆ. ಕೊರೊನಾ ಕೌರವ ಪಡೆಯನ್ನು ಕಂಡಾಕ್ಷಣ ಅಸಲೀ ಕದನ ಆರಂಭವಾಗುವ ಮೊದಲೇ ನಾವು ಉತ್ತರ ಕುಮಾರರಾಗುತ್ತಿದ್ದೇವೆ. ಅರ್ಜುನ ಅವಿತಿರುತ್ತಾನೆ.
ಕೊರೊನಾ ವೈರಾಣು ಜಾಣ. ವಿಮಾನ ಏರಿದರೆ ಜೆಟ್ ವೇಗದಲ್ಲಿ ಚಲಿಸಬಹುದು ಎಂಬುದು ಅದಕ್ಕೆ ಗೊತ್ತಾಗಿದೆ. ಯುರೋಪ್, ಅಮೆರಿಕಕ್ಕೆ ಹೋದರೆ ಪುಷ್ಕಳ ಬೇಟೆ ಸಿಗುತ್ತದೆ ಎಂಬುದೂ ಅದಕ್ಕೆ ಗೊತ್ತಿದೆ. ಹೇಗೂ ಮೀಡಿಯಾ ತನ್ನ ಸ್ವಾಗತಕ್ಕೆ ತುತ್ತೂರಿ ದುಂದುಭಿ ಮೊಳಗಿಸುತ್ತ, ಕಂಡಕಂಡವರಿಗೆ ಮುಖವಾಡ ತೊಡಿಸುತ್ತ, ಸಮೂಹಸನ್ನಿಯನ್ನು ಸೃಷ್ಟಿಸಿ ಇಡೀ ನಾಗರಿಕತೆಯ ಜಂಘಾಬಲವನ್ನೇ ಉಡುಗಿಸುತ್ತಿದೆ. ವಿಮಾನಗಳನ್ನು ನೆಲಕ್ಕಿಳಿಸಿ, ಹೈಸ್ಪೀಡ್ ರೈಲುಗಳನ್ನು, ಕಾರುಗಳನ್ನು ಹಡಗುಗಗಳನ್ನು ನಿಂತಲ್ಲೇ ನಿಲ್ಲಿಸಿದ್ದಷ್ಟೇ ಅಲ್ಲ, ಲಕ್ಷುರಿ ಕಾರುಗಳನ್ನು ತಯಾರಿಸುತ್ತಿದ್ದ ಜಿಎಮ್, ಫೋರ್ಡ್, ಟಾಟಾ ಮಹೀಂದ್ರಗಳೆಲ್ಲ ತಮ್ಮ ಕಾರ್ಖಾನೆಗಳಲ್ಲಿ ವೆಂಟಿಲೇಟರ್‌ಗಳನ್ನೂ ಟೆಸ್ಟಿಂಗ್ ಕಿಟ್‌ಗಳನ್ನೂ ತಯಾರಿಸಲು ತೊಡಗುವಂತೆ ಮಾಡಿದೆ. ಮಹಾನ್ ರಾಷ್ಟ್ರನಾಯಕರುಗಳನ್ನು ಟಿವಿ ಕ್ಯಾಮರಾಗಳ ಎದುರಿಗೆ ತಂದು ನಿಲ್ಲಿಸಿದೆ.
ಈ ಮಹಾನ್ ನಾಯಕರುಗಳಿಗೆ ಕೊರೊನಾ ಒಂದು ಹೊಸ ಪಾಠವನ್ನು ಕಲಿಸುತ್ತಿದೆ. ರಾಷ್ಟ್ರ ರಕ್ಷಣೆ ಎಂದರೆ ಕೇವಲ ಅಣ್ವಸ್ತ್ರಗಳನ್ನೋ ಫೈಟರ್ ಜೆಟ್‌ಗಳನ್ನೋ ಸಬ್ಮರೀನ್‌ಗಳನ್ನೋ ಪೇರಿಸುವುದಷ್ಟೇ ಅಲ್ಲ; ಸಮುದಾಯ ಆರೋಗ್ಯ, ಗುಣಮಟ್ಟದ ಔಷಧ, ಕೈಗೆಟಕುವ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಸಮರ್ಪಣ ಮನೋಭಾವದ ಸ್ವಾಸ್ಥ್ಯ ಸಿಬ್ಬಂದಿ ಕೂಡ ರಕ್ಷಣೆಯ ಭಾಗವೇ ಆಗಬೇಕೆಂಬುದನ್ನು ಅದು ಕಲಿಸುತ್ತಿದೆ.
ಹಾಗೆಯೇ ನಗರಗಳಿಂದ ಗುಳೆಹೊರಟ ಬರಿಹೊಟ್ಟೆಯ, ಖಾಲಿ ಕಿಸೆಯ, ಬೊಬ್ಬೆಗಾಲಿನ ಶ್ರಮಜೀವಿಗಳ ಮೂಲಕ ಅದು ಸರಕಾರಗಳಿಗೆ ಇನ್ನೂ ಒಂದು ಪಾಠವನ್ನು ಕಲಿಸುತ್ತಿದೆ. ರಾಷ್ಟ್ರದ ಘನತೆ ಎಂದರೆ ಕೇವಲ ಥಳಥಳಿಸುವ ಐಟಿ ಪಾರ್ಕ್, ಏರ್ಪೋರ್ಟ್, ಭರ್ಜರಿ ಹೈವೇ, ಪೆಟ್ರೋಲ್ ಬಂಕ್ ಇದ್ದರೆ ಸಾಲದು; ಊರೂರಲ್ಲಿ ನೆರಳಿಗೆ ಒಂದಿಷ್ಟು ಗಿಡಮರಗಳು, ತುರ್ತು ಆಸರೆಗೆ ಉತ್ತಮ ಶಾಲೆ ಇರಬೇಕು, ಶುದ್ಧ ನೀರು-ಶೌಚದ ವ್ಯವಸ್ಥೆ ಇರಬೇಕು. ಕಡೇಪಕ್ಷ ರಕ್ತಸೋರುವ ಕಾಲುಗಳಿಗೆ ಬ್ಯಾಂಡೇಜ್ ಪಟ್ಟಿ ಸಿಗುವಂಥ ಪ್ರಾಥಮಿಕ ಶುಶ್ರೂಷೆಯ ಸೌಲಭ್ಯ ಇರಬೇಕು ಎಂದು ಅದು ಹೇಳುತ್ತಿದೆ.
ಮುಂದಿನ ಗಣರಾಜ್ಯದ ಪರೇಡ್‌ನಲ್ಲಿ ಮಿಲಿಟರಿ ಫೇರಿಗಿಂತ ಮುಂಚೂಣಿಯಲ್ಲಿ ಸುಸಜ್ಜಿತ ಆಸ್ಪತ್ರೆಯ, ಸುಸಜ್ಜಿತ ಶಾಲೆಯ ಮೆರವಣಿಗೆಯ ವ್ಯವಸ್ಥೆ ಮಾಡಿ ಎಂದು ಅದು ಹೇಳುತ್ತಿದೆಯೇನೊ.ಇದನ್ನೆಲ್ಲ ಅಳೆದು ತೂಗಿ ನೋಡಿದರೆ, ಪ್ರಾಯಶಃ ಕೊರೊನಾಕ್ಕೆ ನಾವು ಶಾಪ ಹಾಕಬೇಕಿಲ್ಲ. ಅದನ್ನು ಮೆರೆಸಿ ಕುಣಿಸುತ್ತಿರುವ ಮಾಧ್ಯಮವನ್ನೂ ಶಪಿಸಬೇಕಿಲ್ಲ.
-ನಾಗೇಶ್ ಹೆಗ್ಡೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ