ನವದೆಹಲಿ:
ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರಿಗೆ ತೀವ್ರ ಹಿನ್ನಡೆಯಾಗುವ ರೀತಿ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ನ್ಯಾಯಾಂಗ ವ್ಯವಸ್ಥೆ ವಿರುದ್ಧ ಅವರು ಮಾಡಿದ್ದ ಎರಡು ಟ್ವೀಟ್ ಗಳು ಅವರಿಗೆ ಮುಳುವಾಗಿದೆ.ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಮಾಡಿರುವ ಟ್ವೀಟ್ ನ್ಯಾಯಾಂಗ ನಿಂದನೆಯಾಗಿದೆ ಎಂದು ಇಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ ತಪ್ಪಿತಸ್ಥ ಎಂದು ಹೇಳಿದೆ.
ಅವರಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಆಗಸ್ಟ್ 20ರಂದು ಪ್ರಕಟಿಸಲಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ. ಕ್ರಿಮಿನಲ್ ಕಾನೂನು ನಿಂದನೆಯಡಿ ಪ್ರಶಾಂತ್ ಭೂಷಣ್ ಗೆ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಬಹುದು.
ನ್ಯಾಯವಾದಿ ಪ್ರಶಾಂತ್ ಭೂಷಣ್ ಕಳೆದ ಜೂನ್ 27ರಂದು ಸುಪ್ರೀಂ ಕೋರ್ಟ್ ಬಗ್ಗೆ ಮತ್ತು ಜೂನ್ 29ರಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಬಗ್ಗೆ ಟ್ವೀಟ್ ಮಾಡಿದ್ದರು. ಅದು ವೈರಲ್ ಆಗಿ ನ್ಯಾಯಾಂಗ ನಿಂದನೆಯಾಗಿದೆ ಎಂದು ವ್ಯಾಪಕ ಟೀಕೆ ಬಂದ ನಂತರ ಎರಡೂ ಟ್ವೀಟ್ ಗಳನ್ನು ಟ್ವಿಟ್ಟರ್ ತೆಗೆದುಹಾಕಿತ್ತು. ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಗೆ ನ್ಯಾಯಾಂಗ ನಿಂದನೆ ಶೋಕಾಸ್ ನೊಟೀಸ್ ನೀಡಿತ್ತು.
ಮೊದಲ ಟ್ವೀಟ್ ನಲ್ಲಿ, ತುರ್ತು ಪರಿಸ್ಥಿತಿ ಹೇರದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂದು ಕಳೆದ ಆರು ವರ್ಷಗಳನ್ನು ಇತಿಹಾಸಕಾರರು ಹಿಂತಿರುಗಿ ನೋಡಿದರೆ, ನಾಶದಲ್ಲಿ ಸುಪ್ರೀಂ ಕೋರ್ಟ್ ನ ಪಾತ್ರವನ್ನು ಸ್ಪಷ್ಟವಾಗಿ ನೋಡಬಹುದು. ಅದರಲ್ಲೂ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಇದರಲ್ಲಿ ಅತ್ಯಂತ ದೊಡ್ಡದಾಗಿದೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನು ಪ್ರಶಾಂತ್ ಭೂಷಣ್ ಆರೋಪಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ