ಕಾನ್ಪುರ
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯ ಸಂದರ್ಭಕ್ಕೆ ಹೋಲಿಸಿದರೆ ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಬುದ್ಧ ವ್ಯಕ್ತಿಯಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ವಾದ್ರಾ ಪವೇಶ ಹಾಗೂ ಉತ್ತರಪ್ರದೇಶದಲ್ಲಿ ಅವರು ಚುನಾವಣಾ ಉಸ್ತುವಾರಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹೊಸ ದಿಂಗತಕ್ಕೇರಲಿದೆ ಎಂದು ಅವರು ತಿಳಿಸಿದ್ದಾರೆ.
2014ರಲ್ಲಿ ರಾಹುಲ್ ಗಾಂಧಿಯವರಲ್ಲಿದ್ದ ಪ್ರಬುದ್ಧತೆಯ ಕೊರತೆ ನಿವಾರಣೆಯಾಗಿದ್ದು, ರಾಜಕಾರಣದಲ್ಲಿ ಸಂಪೂರ್ಣ ವಿಕಸಿತರಾಗಿದ್ದಾರೆ. ವಹಿಸಿಕೊಂಡಿರುವ ಹೊಣೆಗಾರಿಕೆಯನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲರು ಎಂಬುದಕ್ಕೆ ಇತ್ತೀಚೆಗಿನ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಉತ್ತರ ಪ್ರದೇಶಕ್ಕೆ ಸಂಜೀವಿನಿ:
ಪ್ರಿಯಾಂಕಾ ವಾದ್ರಾರನ್ನು ಸಕ್ರಿಯ ರಾಜಕಾರಣಕ್ಕೆ ಕರೆತಂದ ಯಶಸ್ಸು ರಾಹುಲ್ ಗಾಂಧಿಯವರಿಗೆ ಸಲ್ಲುತ್ತದೆ ಎಂದಿರುವ ಪ್ರಕಾಶ್ ಜೈಸ್ವಾಲ್, ಅವರ ಈ ನಿರ್ಧಾರ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಜೀವಿನಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಾಂಕಾ ಪ್ರವೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ಹಾಗೂ ಹುರುಪು ಮೂಡಿದೆ. ರಾಯ್‍ಬರೇಲಿಗಷ್ಟೇ ಸೀಮಿತವಾಗಿದ್ದ ಅವರು ಇನ್ನು ಮುಂದೆ ಕೇವಲ ಉತ್ತರ ಪ್ರದೇಶ ಮಾತ್ರವಲ್ಲ, ಇಡೀ ದೇಶದ ಜತೆಗಿರಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಪ್ರಿಯಾಂಕಾ ಜನಪ್ರಿಯತೆ ಗಳಿಸಲಿದ್ದಾರೆ ಎಂದಿದ್ದಾರೆ.ಇದೇ ವೇಳೆ ಎನ್‍ಡಿಎ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಪ್ರಕಾಶ್ ಜೈಸ್ವಾಲ್, ಪ್ರಧಾನಿ ನರೇಂದ್ರ ಮೋದಿ ಜನತೆಗೆ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
