ನವದೆಹಲಿ:
2001 ರ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಮತ್ತು ಇತರ ಇಬ್ಬರಿಗೆ ದೆಹಲಿಯ ವಿಶೇಷ ನ್ಯಾಯಾಲಯ ಗುರುವಾರ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ವೀರೇಂದ್ರ ಭಟ್ ಅವರು ಮೂವರು ಆರೋಪಿಗಳಾದ ಜೇಟ್ಲಿ, ಅವರ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್ಪಿ ಮುರ್ಗೈ ಅವರನ್ನು ಇಂದು ಸಂಜೆ 5 ಗಂಟೆಯೊಳಗೆ ಶರಣಾಗುವಂತೆ ನಿರ್ದೇಶಿಸಿದ್ದು ತಲಾ 1 ಲಕ್ಷ ರೂ. ದಂಡ ಸಹ ವಿಧಿಸಿದ್ದಾರೆ ಎಂದು ಅಪರಾಧಿಗಳ ಪರ ವಕೀಲರಲ್ಲಿ ಒಬ್ಬರಾದ ವಿಕ್ರಮ್ ಪನ್ವಾರ್ ಹೇಳಿದ್ದಾರೆ.
ಜುಲೈ 21 ರಂದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 9 ರ ಕ್ರಿಮಿನಲ್ ಪಿತೂರಿ ಪ್ರಕರಣದ ಆರೋಪದಡಿ ಜೇಟ್ಲಿ, ಅವರ ಹಿಂದಿನ ಪಕ್ಷದ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ನಿವೃತ್ತ ಮೇಜರ್ ಜನರಲ್ ಎಸ್ಪಿ ಮುರ್ಗೈ ಅವರನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ