246.32 ಅಂಕ ಏರಿಕೆ ಕಂಡ ಸೆನ್ಸೆಕ್ಸ್ ..!

ಮುಂಬೈ

    ಚೀನಾದ ಜಿಡಿಪಿ ಬೆಳವಣಿಗೆ 27 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ನಂತರ ಜಾಗತಿಕ ಮಾರುಕಟ್ಟೆಗಳು ಕ್ಷೀಣಿಸಿದರೂ ಸಹ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್‍ಇ)ದ ಸೂಚ್ಯಂಕ. ಸೆನ್ಸೆಕ್ಸ್ ಶುಕ್ರವಾರ ಸತತ ಆರನೇ ದಿನವೂ ಏರುಗತಿಯಲ್ಲಿ ಸಾಗಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 246.32 ಅಂಕ ಏರಿಕೆ ಕಂಡು 39,298.38 ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‍ಎಸ್‍ಇ)ದ ಸೂಚ್ಯಂಕ ನಿಫ್ಟಿ ಸಹ 75.50 ಅಂಕ ಏರಿಕೆ ಕಂಡು 11,661.85 ಕ್ಕೆ ತಲುಪಿದೆ.

    33 ಅಂಕ ಏರಿಕೆಯೊಂದಿಗೆ ಸೆನ್ಸೆಕ್ಸ್ 39,087.83 ರಲ್ಲಿ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ ದಿನದ ಗರಿಷ್ಠ 309 ಏರಿಕೆ ಕಂಡು 39,361.06ಕ್ಕೆ ತಲುಪಿತ್ತು. ದಿನದ ವಹಿವಾಟಿನ ಅಂತ್ಯಕ್ಕೆ ಸೂಚ್ಯಂಕ 246.32 ಅಂಕ ಏರಿಕೆ ಕಂಡು 39,298.38 ಕ್ಕೆ ತಲುಪಿದೆ. ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ 11,684.70 ಮತ್ತು 11,553.15ರ ಮಟ್ಟದಲ್ಲಿತ್ತು.

     ಕಳೆದ ಕೆಲ ವಹಿವಾಟು ದಿನಗಳಲ್ಲಿ ವಿದೇಶಿ ನಿಧಿಗಳು ಭಾರತೀಯ ಷೇರುಗಳ ನಿವ್ವಳ ಖರೀದಿದಾರರಾದ ನಂತರ ಮಾರುಕಟ್ಟೆ ಮನೋಭಾವ ಬದಲಾಯಿತು. ಅಮೆರಿಕ ಮತ್ತು ಚೀನಾ ನಡುವಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಬಗ್ಗೆ ಹೂಡಿಕೆದಾರರು ನಿರೀಕ್ಷೆಯಲ್ಲಿದ್ದರು. ವಲಯ ಸೂಚ್ಯಂಕಗಳಾದ ವಸ್ತುಗಳು, ಇಂಧನ, ಕೈಗಾರಿಕೆ, ಬಂಡವಾಳ ಸರಕು, ವಿದ್ಯುತ್ ಮತ್ತು ಲೋಹಗಳು ಆರನೇ ದಿನದವೂ ಸಕಾರಾತ್ಮಕ ಪ್ರವೃತ್ತಿಯನ್ನು ಉಳಿಸಿಕೊಂಡಿವೆ.

    ಷೇರುಗಳ ಪೈಕಿ ಯೆಸ್ ಬ್ಯಾಂಕ್, ಮಾರುತಿ ಸುಜುಕಿ, ಪವರ್ಗ್ರಿಡ್, ಎನ್ಟಿಪಿಸಿ ಮತ್ತು ಎಲ್ ಅಂಡ್ ಟಿ ಏರುಗತಿಯನ್ನು ಮುಂದುವರೆಸಿದವು, ಟಾಟಾ ಮೋಟಾರ್ಸ್, ಟಾಟಾ ಮೋಟಾರ್ಸ್ ಡಿವಿ, ಬಜಾಜ್ ಆಟೋ ಮತ್ತು ಭಾರ್ತಿ ಏರ್ಟೆಲ್ಗಳಲ್ಲಿನ ಮಾರಾಟ ಭರಾಟೆಯು ಹೆಚ್ಚಿನ ಏರಿಕೆಯನ್ನು ತಡೆದಿವೆ ಎಂದು ಮಾರುಕಟ್ಟೆಯ ದಲ್ಲಾಳಿಗಳು ತಿಳಿಸಿದ್ದಾರೆ.

    ಒಟ್ಟಾರೆ ಮಾರುಕಟ್ಟೆಯ ಗಾತ್ರ ಸದೃಢವಾಗಿತ್ತು. ಬಿಎಸ್‍ಇಯಲ್ಲಿ 1603 ಕಂಪೆನಿಗಳ ಷೇರುಗಳು ಏರಿಕೆ ಕಂಡರೆ 930 ಕಂಪೆನಿಗಳ ಷೇರುಗಳು ಕುಸಿತ ಕಂಡಿವೆ. ಉಳಿದಂತೆ 174 ಕಂಪೆನಿ ಷೇರುಗಳು ಯಥಾಸ್ಥಿತಿಯಲ್ಲಿದ್ದವು. ಚೀನಾ ಜಿಡಿಪಿ ಬೆಳವಣಿಗೆ ಮೂರು ದಶಕಗಳಲ್ಲೇ ದುರ್ಬಲ ಬೆಳವಣಿಗೆ ದಾಖಲಿಸಿರುವ ಹಿನ್ನೆಲೆಯಲ್ಲಿ ಸಾಗರೋತ್ತರ ಮಾರುಕಟ್ಟೆಗಳ ಪೈಕಿ ಏಷ್ಯಾ ಮತ್ತು ಯೂರೋಪ್ ಮಾರುಕಟ್ಟೆಗಳಲ್ಲಿನ ಷೇರುಗಳು ಶುಕ್ರವಾರ ಕುಸಿತ ವಹಿವಾಟು ನಡೆಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ