ಕಾಂಗ್ರೆಸ್ ನಾಯಕತ್ವ ಗೊಂದಲಕ್ಕೆ ತೆರೆ ಎಳೆದ ಸೋನಿಯಾ ಗಾಂಧಿ..!

ನವದೆಹಲಿ.

    ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ನಾಯಕತ್ವ ಪ್ರಶ್ನೆಗೆ ಸದ್ಯಕ್ಕೆ ಸೋನಿಯಾಗಾಂಧಿ ಇತಿಶ್ರೀ ಹಾಡಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ಸೋನಿಯಾಗಾಂಧಿ ಮತ್ತೆ ಮುಂದುವರೆಯಲಿದ್ದಾರೆಂದು ವರದಿಯಾಗಿದೆ.ಸುಮಾರು ಏಳು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ನಾಯಕತ್ವ ಬದಲಾವಣೆಗೆ ಆಗ್ರಹಿಸಿ 20ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಎಐಸಿಸಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸೋಮವಾರ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಗಾಂಧಿ ಕುಟುಂಬವೇ ನಾಯಕತ್ವದಲ್ಲಿ ಮುಂದುವರೆಯಬೇಕೆಂಬ ಒಕ್ಕೊರಲ ಕೂಗು ಕೇಳಿಬಂದಿದ್ದು, ಮಧ್ಯಂತರ ಅಧ್ಯಕ್ಷೆಯಾಗಿರುವ ಸೋನಿಯಾಗಾಂಧಿ ಇನ್ನೂ ಕೆಲವು ತಿಂಗಳ ಕಾಲ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರೆಯುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ.

   2019ರಲ್ಲಿ ನಡೆದ ಲೋಕಸಭಾ ಚುನಾವಣಾ ಸೋಲಿನ ನಂತರ ಈ ಹುದ್ದೆಯನ್ನು ವಹಿಸಿಕೊಂಡಿದ್ದ ಸೋನಿಯಾ ಗಾಂಧಿ ಅವರು ಈ ಹಿಂದೆ ಸ್ಥಾನದಿಂದ ಕೆಳಗಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಸೇರಿದಂತೆ ಕೆಲವು ನಾಯಕರು ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಬೇಕು ಎಂದು ಪತ್ರ ಬರೆದಿದ್ದರು. ಆದರೆ ಈ ಪತ್ರ ಬಿಜೆಪಿ ಪ್ರೇರಿತ ಎಂದು ಕಪಿಲ್ ಸಿಬಲ್ ಹೇಳಿದ್ದರು.

   ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ನಿರ್ಣಾಯಕ ಸಭೆ ಪ್ರಾರಂಭವಾಗುತ್ತಿದ್ದಂತೆ, ಈ ಹುದ್ದೆಗೆ ಚುನಾವಣೆ ನಡೆಯುವವರೆಗೂ ಕಾಂಗ್ರೆಸ್ ಮಧ್ಯಂತರ ಮುಖ್ಯಸ್ಥ ಹುದ್ದೆಯಿಂದ ಮುಕ್ತರಾಗಬೇಕೆಂದು ಸೋನಿಯಾ ಗಾಂಧಿ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ನಾಯಕತ್ವದ ಬದಲಾವಣೆಯ ಬಗ್ಗೆ ಯಾವುದೇ ಪ್ರಮುಖ ನಿರ್ಧಾರ ನಡೆದಿಲ್ಲ ಎನ್ನಲಾಗಿದೆ. ಸಭೆಯಲ್ಲಿ ರಾಹುಲ್ ಗಾಂಧಿ, ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬೇಕಾದ ವಿಷಯವು ಸಾರ್ವಜನಿಕವಾಗಿ ಚರ್ಚೆಯಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಪತ್ರಕ್ಕೆ ಸಹಿಹಾಕಿದವರ ವಿರುದ್ಧವೂ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

    ಸದ್ಯ ಪಕ್ಷ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋನಿಯಾಗಾಂಧಿ ಅವರೇ ಪಕ್ಷದ ನೇತೃತ್ವ ವಹಿಸಬೇಕು. ಹೀಗಾಗಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಅವರೇ ಮಧ್ಯಂತರ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಕೆಲವು ಸದಸ್ಯರು ಸಭೆಯಲ್ಲಿ ಒತ್ತಾಯಿಸಿ, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರೆಂದು ಹಾಗೂ ಸಭೆಯಲ್ಲಿ ಕಾರ್ಯಕಾರಿಗೆ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ವರ್ಚುವಲ್ ಮೂಲಕ ಎಐಸಿಸಿ ಅಧಿವೇಶನ ನಡೆಸಲು ಪಿ ಚಿದಂಬರಂ ಸಲಹೆ ನೀಡಿದರೆಂದು ವರದಿಯಾಗಿದೆ.

    ಸಭೆಯಲ್ಲಿ 48 ನಾಯಕರು ಭಾಗವಹಿಸಿದ್ದು, ಬಹುತೇಕರು ಸೋನಿಯಾಗಾಂಧಿ ಪರ ಒಲವು ತೋರಿದ್ದರಿಂದ ಇನ್ನೂ ಕೆಲವು ತಿಂಗಳುಗಳ ಕಾಲ ಸೋನಿಯಾಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap