ನವದೆಹಲಿ
ವಿಕಲಚೇತನರಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಕೆಯನ್ನು ಸಾಧ್ಯವಾಗಿಸುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಮಾದರಿಯ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳಿಗೆ ವಿಕಲಚೇತನರಿಗಾಗಿ ಕನಿಷ್ಠ ಒಂದಾದರೂ ಮೊಬೈಲ್ ತಯಾರಿಸಬೇಕು ಎಂದು ಡಿಜಿಟಲ್ ಮತ್ತು ಟೆಲಿಕಾಂ ಆಯೋಗ ಸೂಚಿಸಿದೆ.
ಆಯೋಗದ ಅಧ್ಯಕ್ಷ ಮತ್ತು ಟೆಲಿಕಾಂ ಕಾರ್ಯದರ್ಶಿ ಅಂಶು ಪ್ರಕಾಶ್ ಮಾತನಾಡಿ, ಈ ಕುರಿತು ವಿಚಾರ ವಿನಿಮಯ ಮಾಡಿದ್ದು ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ನಂತರ ಮೊಬೈಲ್ ತಯಾರಿಕರಿಗೆ ಸಮ್ಮತಿಸಲಾಗುವುದು. ಗುರುವಾರ ನಡೆದ ಸಭೆಯಲ್ಲಿ ಐದು ಅಥವಾ ಹೆಚ್ಚಿನ ಮಾದರಿಗಳನ್ನು ತಯಾರಿಸುವ ಮೊಬೈಲ್ ತಯಾರಕರು, ವಿಶೇಷ ಚೇತನರಿಗಾಗಿ ಕನಿಷ್ಠ ಒಂದು ಮಾದರಿಯನ್ನು ಹೊರತರಬೇಕೆಂದು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದರೊಂದಿಗೆ ಟೆಲಿಕಾಂ ಆಪರೇಟರ್‌ಗಳು ದಿವ್ಯಾಂಗರನ್ನು ಗುರುತಿಸಿ ಅವರಿಗೆ ವಿಶೇಷ ಸೇವೆಗಳು ಅಥವಾ ಉಪಯುಕ್ತ ಸೇವೆಗಳನ್ನು ಒದಗಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.ದಿವ್ಯಾಂಗರಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ 26 ಬಗೆಯ ವಿಕಲಚೇತನರನ್ನು ಗುರುತಿಸಲಾಗಿದ್ದು, ಅಂತಾರಾಷ್ಟ್ರೀಯ ಟೆಲಿಕಾಂ ಸಂಘಟನೆಯೂ ಅಂಗವಿಕಲರ ಅಗತ್ಯಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸಲು ಶಿಫಾರಸ್ಸು ಮಾಡಿದೆ ಎಂದರು.ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿವಿಧ ಇಲಾಖೆಗಳ ಸಮಿತಿಯನ್ನು ರಚಿಸಿ, ಅದರ ಸಲಹೆಗಳನ್ನು ಪಡೆಯಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
