ನವದೆಹಲಿ
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶುಕ್ರವಾರ ಮಂಡಿಸಿರುವ ಬಜೆಟ್ ಅತ್ಯಂತ ನೀರಸವಾದ ಮುಂಗಡಪತ್ರವಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ ಬಜೆಟ್ ಭಾಷಣ, ಅಸಂಬದ್ಧ ಕಸರತ್ತು ಎಂದು ಟೀಕಿಸಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಹಣಕಾಸು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಜನಸಾಮಾನ್ಯರು ಅಥವಾ ಆರ್ಥಿಕ ತಜ್ಞರ ಧ್ವನಿಯನ್ನು ಆಲಿಸದೆ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಟೀಕಿಸಿದರು .ಮೋದಿ ಸರ್ಕಾರ ಫಲಿತಾಂಶಗಳನ್ನು ನಿರಾಕರಿಸುತ್ತದೆ. ಕ್ಷೇತ್ರದ ವರದಿಗಳನ್ನು ಪರಿಗಣಿಸಲು ನಿರಾಕರಿಸುತ್ತದೆ ಮತ್ತು ಯಶಸ್ವಿನ ಉತ್ಪ್ರೇಕ್ಷಿತ ಹೇಳಿಕೆಗಳ ತಪ್ಪುಗಳನ್ನು ಸರಿಪಡಿಸಲು ನಿರಾಕರಿಸುತ್ತದೆ ಎಂದು ಚಿದಂಬರಂ ಆರೋಪಿಸಿದ್ದಾರೆ.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಭಾಷಣ ವ್ಯರ್ಥ ಕಸರತ್ತು ಎಂದು ಹೇಳಿದ ಅವರು, ಒಟ್ಟು ಆದಾಯ, ಒಟ್ಟು ಖರ್ಚು, ವಿತ್ತೀಯ ಕೊರತೆ, ಆದಾಯ ಕೊರತೆ, ಹೆಚ್ಚುವರಿ ಆದಾಯ ಸಜ್ಜುಗೊಳಿಸುವಿಕೆ ಅಥವಾ ಹಣಕಾಸು ರಿಯಾಯಿತಿಯನ್ನು ಬಹಿರಂಗಪಡಿಸದ ಬಜೆಟ್ ಎಲ್ಲಿಯಾದರೂ ಇದೆಯೇ ? ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮನ್ರೇಗಾ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಆರೋಗ್ಯ ಕ್ಷೇತ್ರ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳಿಗೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಬಜೆಟ್ ಭಾಷಣದಲ್ಲೇ ಬಹಿರಂಗಪಡಿಸಿಲ್ಲ ಎಂದು ಚಿದಂಬರಂ ಹೇಳಿದರು .ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಚಿದಂಬರಂ, ಜನರಿಗೆ ಮೂಲಭೂತ ಸಾರ್ವಜನಿಕ ಸರಕು ಮತ್ತು ಸೇವೆಯನ್ನು ತಾವು ಮತ್ತು ತಮ್ಮ ಸರ್ಕಾರ ಮಾತ್ರ ಒದಗಿಸುತ್ತಿದೆ ಎಂದು ಭಾವಿಸಿದ್ದಾರೆ ಎಂದು ಹರಿಹಾಯ್ದರು.
ನಾವು ಒಪ್ಪುವುದಿಲ್ಲ. ರಾಜ್ಯಗಳಿಗೆ ಸಾರ್ವಜನಿಕ ಸರಕು ಮತ್ತು ಸೇವೆಗಳನ್ನು ತಲುಪಿಸುವ ಸಾಮರ್ಥ್ಯವಿದೆ ಎಂದು ನಾವು ಭಾವಿಸುತ್ತೇವೆ ಮತ್ತು ರಾಜ್ಯ ಸರ್ಕಾರಗಳನ್ನು ಕೇವಲ ಸ್ಥಳೀಯ ಆಡಳಿತಗಳಿಗೆ ಇಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು.ಬಜೆಟ್ ಅನ್ನು ದೇಶದಲ್ಲಿ ಒಕ್ಕೂಟ ವ್ಯವಸ್ಥೆಯ ಮೇಲಿನ ಆಕ್ರಮಣ ಎಂದು ವಿವರಿಸಿದ ಚಿದಂಬರಂ, ಮೋದಿ ಸರ್ಕಾರವು ಭಾರತವನ್ನು ಒಂದು ದೊಡ್ಡ ರಾಜ್ಯ ಸರ್ಕಾರದಂತೆ ಪರಿಗಣಿಸುವುದಿಲ್ಲ ಮತ್ತು ರಾಜ್ಯದ ಹಕ್ಕು ಮತ್ತು ಕರ್ತವ್ಯದ ಕೆಲಸಗಳನ್ನು ಮಾಡುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿದೆ ಎಂದು ಹೇಳಿದರು.
ಇದು ಸಹಕಾರ ಒಕ್ಕೂಟ ವ್ಯವಸ್ಥೆಯಲ್ಲ, ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೇರಿರುವ ಅಸಮಾನ ಸಹಭಾಗಿತ್ವವಾಗಿದೆ ಎಂದು ಅವರು ಟೀಕಿಸಿದರು.