ಲಕ್ನೋ,
“ನಮ್ಮ ರಾಜ್ಯದಿಂದ ವಲಸೆ ಕಾರ್ಮಿಕರನ್ನು ಕರೆಸಿ ಬೇರೆ ರಾಜ್ಯಗಳು ಕೆಲಸ ನೀಡಲು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಹೇಳಿದ್ದಾರೆ.ಸೋಮವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. “ವಲಸೆ ಕಾರ್ಮಿಕರ ಜೊತೆ ಸರ್ಕಾರ ನಿಲ್ಲಲಿದೆ. ಅವರಿಗೆ ರಾಜ್ಯದಲ್ಲಿಯೇ ಕೆಲಸ ನೀಡಲು ಪ್ರಯತ್ನ ನಡೆಸಲಾಗುತ್ತದೆ” ಎಂದರು.
“ಬೇರೆ ರಾಜ್ಯಗಳು ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸಲು ರಾಜ್ಯದ ಒಪ್ಪಿಗೆ ಪಡೆಯಬೇಕು. ಇದಕ್ಕಾಗಿ ವಲಸೆ ಕಾರ್ಮಿಕರ ಆಯೋಗವನ್ನು ರಚನೆ ಮಾಡಲಾಗುತ್ತದೆ” ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
ವಲಸೆ ಕಾರ್ಮಿಕರನ್ನು ಗುರುತಿಸುವುದು ಹೇಗೆ?, ಅವರ ವಲಸೆ ತಡೆಯುವುದು ಹೇಗೆ?, ಬೇರೆ ರಾಜ್ಯಗಳು ಒಪ್ಪಿಗೆ ಪಡೆಯುವುದು ಹೇಗೆ ಮುಂತಾದ ವಿವರಗಳನ್ನು ಯೋಗಿ ಆದಿತ್ಯನಾಥ್ ಇಂದಿನ ಸಭೆಯಲ್ಲಿ ನೀಡಿಲ್ಲ. ಆದರೆ, ಕಾರ್ಮಿಕರ ಹಿತ ಕಾಯಲು ಬದ್ಧ ಎಂದು ಘೋಷಣೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಯೋಗಿ ಆದಿತ್ಯನಾಥ್, “ವಲಸೆ ಕಾರ್ಮಿಕರಿಗೆ ರಾಜ್ಯದಲ್ಲಿಯೆ ಕೆಲಸ ಸಿಗುವಂತೆ ಆಗಬೇಕು. ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ರಾಜ್ಯಗಳು ಕಾರ್ಮಿಕರನ್ನು ಯಾವ ರೀತಿ ನಡೆಸಿಕೊಂಡವು ಎಂಬುದು ತಿಳಿದಿದೆ. ಇಲ್ಲೇ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಹೇಳಿದರು.
“ಬೇರೆ ರಾಜ್ಯಗಳು ನಮ್ಮ ರಾಜ್ಯದ ವಲಸೆ ಕಾರ್ಮಿಕರಿಗೆ ಕೆಲಸ ನೀಡುವುದಾದರೆ ವಿಮೆ, ಸಾಮಾಜಿಕ ಭದ್ರತೆಯನ್ನು ನೀಡಬೇಕು. ರಾಜ್ಯದ ಒಪ್ಪಿಗೆ ಇಲ್ಲದೆ ನಮ್ಮ ರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲ” ಎಂದು ಯೋಗಿ ಆದಿತ್ಯನಾಥ್ ಹೇಳಿದರು.
“ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಇದ್ದರು. ಲಾಕ್ ಡೌನ್ ಅವಧಿ ಮುಗಿಯುತ್ತಿದ್ಧಂತೆ ಆ ರಾಜ್ಯಗಳು ಕಾರ್ಮಿಕರನ್ನು ವಾಪಸ್ ಕರೆದುಕೊಂಡು ಹೋಗಲು ಆಗಮಿಸುತ್ತವೆ. ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು” ಯೋಗಿ ಆದಿತ್ಯನಾಥ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ