ನವದೆಹಲಿ:
ವಾಸ್ಯಥವಿಕ ಗಡಿ ರೇಖೆಯಲ್ಲಿ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.
ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಯೋಧರ ಅತಿಕ್ರಮಣವನ್ನು ಭಾರತೀಯ ಸೈನಿಕರು ಹಿಮ್ಮೆಟಿಸಿದ ಬೆನ್ನಲ್ಲೇ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಭಾರತದ ವಿರುದ್ಧ ಕಿಡಿಕಾರಿದೆ. ‘ಭಾರತ ಏನಾದರೂ ಚೀನಾ ತಂಟೆಗೆ ಬಂದರೆ 1962ರ ಯುದ್ಧದಲ್ಲಿ ಆದದ್ದಕ್ಕಿಂತ ಹೆಚ್ಚು ನಷ್ಟವನ್ನು ಉಂಟು ಮಾಡುವುದಾಗಿ ಹೇಳಿದೆ. ಅಲ್ಲದೆ ಭಾರತ ಶಕ್ತಿಶಾಲಿ ಚೀನಾವನ್ನು ಎದುರು ಹಾಕಿಕೊಳ್ಳುತ್ತಿದೆ. ತನಗೆ ಅಮೆರಿಕದಿಂದ ಬೆಂಬಲ ಸಿಗಲಿದೆ ಎಂಬ ಭ್ರಮೆಯನ್ನು ಭಾರತ ಕಾಣುವುದು ಬೇಡ. ನಮ್ಮ ಜೊತೆಗೆ ಭಾರತಕ್ಕೆ ಸ್ಪರ್ಧೆಯೇ ಬೇಕೆಂದಾದರೆ, ಚೀನಾದ ಬಳಿ ಭಾರತಕ್ಕಿಂತ ಹೆಚ್ಚು ಸೇನಾ ಸಾಮರ್ಥ್ಯ ಹಾಗೂ ಸಲಕರಣೆಗಳಿವೆ. ಭಾರತ ತನ್ನ ಸೇನಾ ಸಾಮರ್ಥ್ಯ ಪ್ರದರ್ಶಿಸಲು ಬಂದರೆ ಚೀನಾದ ಸೇನೆ ಖಂಡಿತ ಭಾರತದ ಸೇನೆಗೆ 1962ರಲ್ಲಿ ಉಂಟುಮಾಡಿದ್ದಕ್ಕಿಂತ ಹೆಚ್ಚು ನಷ್ಟ ಉಂಟುಮಾಡುವುದು ನಿಶ್ಚಿತ ಎಂದು ಪತ್ರಿಕೆ ಗುಡುಗಿದೆ.