ನವದೆಹಲಿ
ದೇಶದಲ್ಲಿ ಅತ್ಯಂತ ಚರ್ಚಾತ್ಮಕ ವಿಷಯಗಳಲ್ಲೊಂದಾದ ರಫೇಲ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರಕ್ಕೆ ಇಂದು ತೀವ್ರ ಹಿನ್ನಡೆಯಾಗಿದೆ. ‘ಕಳುವಾಗಿದೆ ಎನ್ನಲಾದ ದಾಖಲೆಗಳನ್ನು ಪರಾಮರ್ಶಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಇದರಿಂದ ಸೋರಿಕೆಯಾದ ದಾಖಲೆಗಳನ್ನು ತೀರ್ಪು ಮರುಪರಿಶೀಲನೆಗೆ ಬಳಸಿಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ವಾದಕ್ಕೆ ಕೋರ್ಟ್ ಮಾನ್ಯತೆ ನೀಡಿಲ್ಲ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ೨೦೧೮ರ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಗೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ತಿರಸ್ಕರಿಸಿದೆ.
ರಫೇಲ್ ಜೆಟ್ಗಳ ದರ ಮತ್ತು ಡಸಾಲ್ಟ್ನ ಆಫ್ಸೆಟ್ ಪಾಲುದಾರರನ್ನಾಗಿ ಅನಿಲ್ ಅಂಬಾನಿ ಒಡೆತನದ ಕಂಪೆನಿಯ ನೇಮಕದ ವಿರುದ್ಧ ಸಲ್ಲಿಸಿದ್ದ ಅರ್ಜಿಗಳು ಸೇರಿದಂತೆ ತೀರ್ಪು ಮರುಪರಿಶೀಲನೆಗಾಗಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ಈ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ದಿನ ನಿಗದಿಪಡಿಸುವುದಾಗಿ ಕೋರ್ಟ್ ತಿಳಿಸಿದೆ. ಇದರಿಂದ ನ್ಯಾಯಾಲಯವು ಅನಿಲ್ ಅಂಬಾನಿ ಪಾಲುದಾರಿಕೆ ವಿವಾದ ಸೇರಿದಂತೆ ಒಪ್ಪಂದದ ವಿವಿಧ ಕೋನಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ನಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಅರ್ಜಿದಾರರು ಹೊಸದಾಗಿ ದಾಖಲೆಗಳನ್ನು ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. ವಿಚಾರಣೆ ವೇಳೆ ಅರ್ಜಿದಾರರು ಡಸಾಲ್ಟ್ನ ಆಫ್ಸೆಟ್ ಪಾಲುದಾರರಾಗಿ ಅನಿಲ್ ಅಂಬಾನಿ ಮಾಲಿಕತ್ವದ ಕಂಪೆನಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದರು.
ವಕೀಲ ಪ್ರಶಾಂತ್ ಭೂಷಣ್, ಬಿಜೆಪಿಯ ಮಾಜಿ ಮುಖಂಡರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ರಕ್ಷಣಾ ಇಲಾಖೆಯಲ್ಲಿದ್ದ ಕಡತಗಳ ನಕಲನ್ನು ಅಡಕ ಮಾಡಲಾಗಿದೆ. ರಫೇಲ್ ದಾಖಲೆಗಳನ್ನು ಕಳವು ಮಾಡಲಾಗಿದ್ದು, ಅವುಗಳನ್ನು ಅರ್ಜಿಯಲ್ಲಿ ಸೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
Arun Shourie, who filed review plea in Rafale deal verdict: Our argument was that because the documents relate to Defence you must examine them. You asked for these evidence & we have provided it. So Court, has accepted our pleas & rejected the arguments of the Govt. pic.twitter.com/5S2xI0lkiV
— ANI (@ANI) April 10, 2019
ದಾಖಲೆಗಳು ರಕ್ಷಣೆಗೆ ಸಂಬಂಧಿಸಿರುವುದರಿಂದ ಕೋರ್ಟ್ ಅವುಗಳನ್ನು ಪರಿಶೀಲನೆ ನಡೆಸಬೇಕು ಎನ್ನುವುದು ನಮ್ಮ ವಾದವಾಗಿತ್ತು. ಈ ಸಾಕ್ಷ್ಯಗಳಿಗಾಗಿ ಅವರು ಕೇಳಿದ್ದರು ಮತ್ತು ನಾವು ಅವುಗಳನ್ನು ಒದಗಿಸಿದ್ದೇವೆ. ಆದ್ದರಿಂದ ಸುಪ್ರೀಂಕೋರ್ಟ್ ನಮ್ಮ ಅರ್ಜಿಯನ್ನು ಸ್ವೀಕರಿಸಿದೆ ಮತ್ತು ಸರ್ಕಾರದ ವಾದವನ್ನು ತಿರಸ್ಕರಿಸಿದೆ ಎಂದು ಅರುಣ್ ಶೌರಿ ಹೇಳಿದ್ದಾರೆ. ಸರ್ಕಾರವು ಸುಪ್ರೀಂಕೋರ್ಟ್ಅನ್ನು ತಪ್ಪುದಾರಿಗೆ ಎಳೆದಿತ್ತು. ಅದನ್ನು ತೋರಿಸಲು ಈ ದಾಖಲೆಗಳು ನೆರವು ನೀಡಲಿವೆ. ಮೋದಿ ಅವರು ದೇಶಕ್ಕೆ ಸುಳ್ಳು ಹೇಳಿದ್ದಾರೆ. ಮತ್ತು ನಾವೀಗ ವಾಸ್ತವವನ್ನು ಮುಂದಿಡಲಿದ್ದೇವೆ ಎಂದು ಶೌರಿ ಹೇಳಿದ್ದಾರೆ.