ಪಣಜಿ:
ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ರೈಲ್ವೆ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮನವಿ ಮಾಡಿದ್ದಾರೆ. “ಸಾರ್ವಜನಿಕ ಆಸ್ತಿಯನ್ನು ಗುರಿಯಾಗಿಸಿಕೊಂಡು ಮಾಡಿರುವ ದಾಳಿ ದುರದೃಷ್ಟಕರವಾಗಿದೆ. ಇದು ಹಿಂಸಾಚಾರವನ್ನು ಪ್ರಚೋದಿಸುವ ಜನರ ಮನಸ್ಥಿತಿಯನ್ನು ಸಹ ತೋರಿಸುತ್ತದೆ” ಎಂದು ಸಚಿವರು ಹೇಳಿದರು.
“ನಾವು ಪೊಲೀಸ್ ಠಾಣೆಗಳಲ್ಲಿ ಅಗತ್ಯ ದೂರುಗಳನ್ನು ಸಲ್ಲಿಸಿದ್ದೇವೆ, (ಈ ಘಟನೆಗಳು) ಹೆಚ್ಚಾಗಿ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿವೆ. ಪಶ್ಚಿಮ ಬಂಗಾಳ ಸರ್ಕಾರ ಈ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
“ಈ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಅಧಿಕಾರ ರೈಲ್ವೆಗೆ ಇಲ್ಲ. ಸ್ಥಳೀಯ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ರೈಲ್ವೆ ಸಂರಕ್ಷಣಾ ಪಡೆ ಸ್ಥಳೀಯ ಪೊಲೀಸರೊಂದಿಗೆ ದುಷ್ಕರ್ಮಿಗಳನ್ನು ಗುರುತಿಸಲು ಸಹಕರಿಸಲಿದೆ.ನಮ್ಮಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯಗಳೆಂದು ಭಾವಿಸಿ ಕ್ರಮ ಕೈಗೊಳ್ಳುವರು ಎಂದು ನಾನು ಭಾವಿಸುತ್ತೇನೆ” ಎಂದರು.