ಲಖನೌ:
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ನಿರಪರಾಧಿಗಳು ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದು ಪೂರ್ವಯೋಜಿತ ಕೃತ್ಯವಲ್ಲ ಎಂದು ನ್ಯಾಯಾಧೀಶರು ಈ ತೀರ್ಪಿನಲ್ಲಿ ಉಲ್ಲೇಖಿಸಿ ಎಲ್ಲರನ್ನೂ ಖುಲಾಸೆಗೊಳಿಸಿದ್ದಾರೆ. ಇದಕ್ಕೆ ಕಿಡಿ ಕಾರಿರುವ ಅಂದಿನ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡ್ಬೋಲೆ, ಐದು ಗಂಟೆಯೊಳಗೆ ಮಸೀದಿ ಕೆಡುವುದು ಎಂದರೆ ಅದು ಪೂರ್ವನಿಯೋಜಿತ ಅಲ್ಲವೆನ್ನುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ನರಸಿಂಹರಾವ್ ಅವರ ಗೃಹ ಕಾರ್ಯದರ್ಶಿಯಾಗಿದ್ದ ಗೋಡ್ಬೋಲೆ, ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ತೀರ್ಪಿನಿಂದಾಗಿ ನಾನು ತಲ್ಲಣಗೊಂಡಿದ್ದೇನೆ, ಬೃಹತ್ ಮಸೀದಿಯನ್ನು ಐದು ಗಂಟೆಗಳ ಒಳಗೆ ಯಾವುದೇ ಸಿದ್ಧತೆ ಇಲ್ಲದೇ ಉರುಳಿಸುವುದು ಅಸಾಧ್ಯ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆ, ಅಪರಾಧ ಕಾನೂನು ವ್ಯವಸ್ಥೆಯ ವ್ಯಾಖ್ಯಾನ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಾಬ್ರಿ ಮಸೀದಿ ಕೆಡವಲು ಯಾವುದೇ ಸಂಚು ನಡೆದಿಲ್ಲ ಎಂದು ಹೇಳಿದರೆ ನಂಬಲು ಬಹಳ ಕಷ್ಟವಾಗುತ್ತದೆ. ನ್ಯಾಯಾಲಯ ಸುಮಾರು 500 ಸಾಕ್ಷಿಗಳ ವಿಚಾರಣೆ ನಡೆಸಿದರೂ ಸಂಚು ನಡೆದಿದ್ದರ ಸುಳಿವು ಸಿಕ್ಕಿಲ್ಲವೆಂದಾಯಿತು. ಇದು ನಿಜಕ್ಕೂ ಅಚ್ಚರಿ. ಅಷ್ಟು ದೊಡ್ಡ ಗುಂಪು ತಂತಾನೆ ಮಸೀದಿ ಸ್ಥಳಕ್ಕೆ ಬಂದು ಸೇರಲು ನನ್ನ ಪ್ರಕಾರ ಅಸಾಧ್ಯ ಎಂದಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ನಿವೃತ್ತಿಯ ನಂತರ ಅವರು ಬರೆದಿರುವ ಪುಸ್ತಕದಲ್ಲಿ ಬಾಬ್ರಿ ಮಸೀದಿ ಕೆಡವಿದ ಸಂದರ್ಭಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರು, 1992ರಲ್ಲಿ ಬಾಬ್ರಿ ಮಸೀದಿ ಕೆಡವುವ ಸಂಚು ರೂಪಿಸಿದ್ದು ಗೊತ್ತಾಗಿ ಅದನ್ನು ಉಳಿಸಲು ತಾವು ಪ್ರಯತ್ನಿಸಿದ್ದುದಾಗಿ, ಆದರೆ ಆಗ ಮುನ್ನೆಚ್ಚರಿಕೆಯಾಗಿ ಸಂವಿಧಾನದ 356ನೇ ವಿಧಿಯನ್ನು ಬಳಕೆ ಮಾಡಿ ಬಾಬ್ರಿ ಕಟ್ಟಡವನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಎರಡು ದಿನಗಳ ಮುಂಚೆಯೇ ಗೃಹ ಸಚಿವಾಲಯವು ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನ ಕೇಳಿಕೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ನರಸಿಂಹ ರಾವ್ ಅವರು, ತಮ್ಮದೇ ಕಾರಣವೊಡ್ಡಿ ಈ ಪ್ರಸ್ತಾವವನ್ನು ಒಪ್ಪಲಿಲ್ಲ ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ.
‘ಪ್ರಧಾನಿ ನರಸಿಂಹ ರಾವ್ ಅವರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಸ್ಥಿತಿಯಲ್ಲಿದ್ದಂತೆ ತೋರಲಿಲ್ಲ. ಆರ್ಟಿಕಲ್ 356 ಅನ್ನು ಬಳಕೆ ಮಾಡಲು ರಾಜಕೀಯವಾಗಿ ಅವರಿಗೆ ಸಮ್ಮತವಾಗಿರಲಿಲ್ಲ. ಆ ವಿಚಾರದ ಬಗ್ಗೆ ಈಗ ಇಷ್ಟು ಮಾತ್ರ ಹೇಳಬಹುದು. ಅಂದಿನ ಸಂದರ್ಭದ ಬಗ್ಗೆ ಹೇಗಾದರೂ ಅರ್ಥೈಸಿಕೊಳ್ಳಬಹುದು’ ಎಂದೂ ಅವರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ