ವಿಶಾಖಪಟ್ನಂ:
ಇಷ್ಟು ದಿನ ಸುಮ್ಮನಿದ್ದ ಮೋದಿ ಇದ್ದಕ್ಕಿದಂತೆ ಇಂದು ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ ,ವಿರೋಧ ಪಕ್ಷದವರು ದೇಶದಲ್ಲಿ ಮಾಡುತ್ತಿರುವ ಕ್ಷುಲ್ಲಕ ರಾಜಕಾರಣದಿಂದ ಶತ್ರುಗಳಿಗೆ ಲಾಭವಾಗುತ್ತದೆ ದೇಶದ ಸರ್ವತೋಮುಖ ಬೆಳವಣಿಗೆಯ ಕಡೆ ಗಮನ ಕೊಡುವುದನ್ನು ಬಿಟ್ಟು ತಮ್ಮ ಸರ್ಕಾವನ್ನು ಅಧಿಕಾರದಿಂದ ಕೆಳಗಿಳಿಸುವುದೊಂದೆ ವಿರೋಧ ಪಕ್ಷಗಳ ಚುನಾವಣಾ ಅಜೆಂಡಾವಾಗಿದೆ ಎಂದು ಕಿಡಿಕಾರಿದ್ದಾರೆ.
ಇಡೀ ವಿಶ್ವವೇ ಪಾಕಿಸ್ತಾನದಿಂದ ಭಯೋತ್ಪಾದನೆ ಬಗ್ಗೆ ಉತ್ತರ ಬಯಸುತ್ತಿರುವಾಗ ಭಾರತದಲ್ಲಿ ಕೆಲವರು ಈ ಹೊತ್ತಿನಲ್ಲಿ ದೇಶದ ಭದ್ರತಾ ಪಡೆಯನ್ನು ದುರ್ಬಲಗೊಳಿಸಲು ಈ ನೆಲದಲ್ಲಿರುವವರೇ ಕೆಲವರು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ವಿಶಾಖಪಟ್ಣಂನಲ್ಲಿ ಬಿಜೆಪಿಯ ಬೃಹತ್ ಸಮಾವೇಷವನ್ನು ಉದ್ದೇಶಿಸಿ ಮಾತನಾಡುತ್ತಾ ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ನೀವು ಏನು ಮಾತನಾಡುತ್ತಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು, ನಿಮ್ಮ ಮಾತುಗಳನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಶ್ಲಾಘಿಸಲಾಗಿದೆ ಮತ್ತು ಅವರು ಅದನ್ನು ಭಾರತವನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಇಲ್ಲಿ ಪಕ್ಷಗಳು ಕಲಬೆರಕೆಯ ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದ್ದು ಅದು ದೇಶದ ಶತ್ರುಗಳಿಗೆ ಸುಲಭ ಮಾಡಿಕೊಡುತ್ತಿದೆ. ನನ್ನನ್ನು ದ್ವೇಷಿಸುವ ಹೆಸರಿನಲ್ಲಿ ದೇಶವನ್ನು ದ್ವೇಷಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.