ನವದೆಹಲಿ:
ಒಂದು ಕಡೆ ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 40 ಸಾವಿರ ಗಡಿ ದಾಟಿದೆ. ಮತ್ತೊಂದು ಕಡೆ ದೆಹಲಿಯನ್ನು ಪುನಃ ಆರಂಭಿಸಬೇಕಾಗಿದೆ ಎಂದಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾವು ಕೊರೋನಾ ವೈರಸ್ ಜೊತೆಯೇ ಜೀವನ ಕಟ್ಟಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಹಾಮಾರಿ ಕೊರೋನಾ ಕಟ್ಟಿಹಾಕುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಅನ್ನು ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಿದ್ದು, ಇಡೀ ರಾಷ್ಟ್ರ ರಾಜಧಾನಿ ರೆಡ್ ಜೋನ್ ನಲ್ಲಿದೆ.
ಇಡೀ ದೆಹಲಿ ರೆಡ್ ಜೋನ್ ನಲ್ಲಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರಕ್ಕೆ ಬರಬೇಕಾದ ಆದಾಯ ಕಡಿಮೆ ಆಗಿದೆ. ಕಳೆದ ಏಪ್ರಿಲ್ ನಲ್ಲಿ ಕೇವಲ 300 ಕೋಟಿ ರೂ. ಆದಾಯ ಬಂದಿದೆ .ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ 35 ಸಾವಿರ ಕೋಟಿ ರೂ. ಆದಾಯ ಬರುತ್ತದೆ.
ಸರ್ಕಾರಕ್ಕೆ ಬರಬೇಕಾದ ಆದಾಯ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾದರೆ ಸರ್ಕಾರ ನಡೆಸುವುದು ಹೇಗೆ? ಇದರಿಂದ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದೆಹಲಿಯನ್ನು ಪುನಃ ಆರಂಭಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ ಇತರೆ ಪ್ರದೇಶಗಳನ್ನು ಗ್ರೀನ್ ಜೋನ್ ಎಂದು ಘೋಷಿಸಬೇಕು ಎಂದು ದೆಹಲಿ ಸಿಎಂ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.