ನವದೆಹಲಿ:
ಪತಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ ಆದರೆ ಇಲ್ಲೊಬ್ಬ ಹೆಣ್ಣು ತನ್ನ ಪತಿ ತನಗೆ ಸ್ಮಾರ್ಟ್’ಫೋನ್ ಕೊಡಿಸಲಿಲ್ಲಾ ಎಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಮೈದಾನ್ ಗರ್ಹಿ ಪ್ರದೇಶದಲ್ಲಿ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಜ್ಯೋತಿ (29) ಎಂದು ಗುರುತಿಸಲಾಗಿದೆ. ಮೇ.27 ರಂದು ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಮಕ್ಕಳಿಗೆ ಶಾಲೆಯಲ್ಲಿ ಆನ್’ಲೈನ್ ತರಗತಿ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಮಹಿಳೆ ತನ್ನ ಪತಿಗೆ ಸ್ಮಾರ್ಟ್ ಫೋನ್ ಖರೀದಿಸುವಂತೆ ತಿಳಿಸಿದ್ದಾಳೆ. ಈ ವೇಳೆ ಪತಿ ಲಾಕ್’ಡೌನ್ ಅಂತ್ಯಗೊಂಡ ಬಳಿಕ ಖರೀದಿ ಮಾಡುವುದಾಗಿ ತಿಳಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ನಡುವೆ ಜಗಳ ನಡೆದ ಕಾರಣ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ .
ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಹಿಳೆಯ ದೇಹ ಶೇ.90ರಷ್ಟು ಸುಟ್ಟುಹೋಗಿದ್ದ ಪರಿಣಾಮ ಬದುಕುಳಿಯಲು ಸಾಧ್ಯವಾಗಿಲ್ಲ. ದಂಪತಿಗಳಿಬ್ಬರು 7 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆಂದು ಮಹಿಳೆಯ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.