ಚುನಾವಣಾ ಭರಾಟೆಯಲ್ಲಿ ಕಣ್ಮರೆಯಾದ ಅಯೋಧ್ಯಾ ವಿವಾದ..!!!

ಆಯೋಧ್ಯಾ

      ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರ ಬಿರುಸಾಗಿಯೇ ಸಾಗಿದೆ.

      ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಆದರೆ, ವಿಶೇಷವೆಂದರೆ, ದೇಶಾದ್ಯಂತ ಚರ್ಚೆಯ ವಿಷಯವಾಗಿರುವ, 2014ರ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಪ್ರಮುಖ ಕಾರಣ ಎಂದೇ ವಿಶ್ಲೇಷಿಸಲಾಗಿರುವ ಅಯೋಧ್ಯಾ ರಾಮಮಂದಿರ ನಿರ್ಮಾಣದ ಕುರಿತು ಯಾವುದೇ ಪಕ್ಷಗಳು ಈ ಬಾರಿ ಚಕಾರವೆತ್ತುತ್ತಿಲ್ಲ.
ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್ ಎಸ್ಎಸ್ ) ರಾಷ್ಟ್ರೀಯತೆಯ ಬಲದ ಮೇಲೆ ಮತ ಕೇಳುತ್ತಿದ್ದರೆ, ವಿಪಕ್ಷಗಳು ಮತಗಳ ವಿಕೇಂದ್ರೀಕರಣ ತಪ್ಪಿಸಲು ಸೂಕ್ಷ್ಮ ವಿವಾದಗಳ ಪ್ರಸ್ತಾಪದಿಂದ ದೂರವೇ ಉಳಿದಿದೆ.

      2014ರಲ್ಲಿ ಅಯೋಧ್ಯಾ ರಾಮ ಮಂದಿರ ನಿರ್ಮಿಸಿಯೇ ಸಿದ್ಧ.. ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಮಿತ್ರ ಪಕ್ಷಗಳ ನಾಯಕರು ಅಯೋಧ್ಯಾ ವಿವಾದವನ್ನು ಯಾವುದೇ ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪಿಸದೆ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸುತ್ತಿದ್ದಾರೆ.

      ಕಳೆದ ತಿಂಗಳು ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಿದ್ದ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಹನುಮನಘರ್ ದೇಗುಲಕ್ಕೆ ಭೇಟಿ ನೀಡಿದರೇ ಹೊರತು, ವಿವಾದಿತ ರಾಮಮಂದಿರತ್ತ ಸುಳಿಯಲಿಲ್ಲ.

ರಾಮಮಂದಿರವಿರುವ ಅಯೋಧ್ಯೆ ಫೈಜಾಬಾದ್ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಕ್ಷೇತ್ರದ 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 6ರಂದು ಚುನಾವಣೆ ನಡೆಯಲಿದೆ. ಸದ್ಯ ಆ ಕ್ಷೇತ್ರ ಬಿಜೆಪಿ ಆಡಳಿತದಲ್ಲಿದೆ. 2004ರಲ್ಲಿ ಕಾಂಗ್ರೆಸ್‍ ಜಯಗಳಿಸಿತ್ತು. 1991ರಲ್ಲಿ ರಾಮಮಂದಿರ ನಿರ್ಮಾಣದ ಅಭಿಯಾನ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಕಮ್ಯನಿಸ್ಟ್ ಪಕ್ಷದ ಅಭ್ಯರ್ಥಿಗೆ ಜನರು ಒಲವು ತೋರಿದ್ದರು.

ಈ ಕ್ಷೇತ್ರದಲ್ಲಿ ಶೇ.13ರಷ್ಟು ಯಾದವ ಮತದಾರರಿದ್ದು, ಶೇ.15ರಷ್ಟು ಅಲ್ಪಸಂಖ್ಯಾತರು ಹಾಗೂ ಶೇ.4ರಷ್ಟು ದಲಿತ ಮತದಾರರಿದ್ದಾರೆ. ಶೇ.29ರಷ್ಟು ಹಿಂದೂ ಮತದಾರರಿದ್ದಾರೆ. ಬಿಜೆಪಿ ಮೇಲ್ವರ್ಗದ ಜನರ ಮೇಲೆ ಕಣ್ಣಿಟ್ಟಿದ್ದರೆ, ಕಾಂಗ್ರೆಸ್‍ ಜಾತಿ ಲೆಕ್ಕಾಚಾರ ಬದಿಗೊತ್ತಿ, ತಮ್ಮ ‘ನ್ಯಾಯ್ ‘ ಯೋಜನೆ ಮೂಲಕವೇ ಮತ ಸೆಳೆಯುವ ತಂತ್ರ ರೂಪಿಸಿದೆ.

        ಆದರೆ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಸ್ ಪಿ, ಬಿಎಸ್ಪಿ ಪಕ್ಷಗಳಿಗೆ ಕೂಡ ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕೆ ಭವಿಷ್ಯವಿಲ್ಲ ಎಂಬುದರ ಅರಿವು ಮೂಡಿದ್ದು, ಹೊಸ ತಂತ್ರಗಳ ಮೊರೆ ಹೋಗಿವೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಕೂಡ ತಮ್ಮ ಭಾಷಣದಲ್ಲಿ ಎಲ್ಲಿಯೂ ರಾಮಮಂದಿರದ ಕುರಿತು ಪ್ರಸ್ತಾಪಿಸದೆ, ಕೊನೆಯಲ್ಲಿ ಮಾತ್ರ ಜೈ ಶ್ರೀರಾಮ್ ಎನ್ನುವ ಮೂಲಕ ತಮ್ಮ ಉದ್ದೇಶವನ್ನು ಜನರಿಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.

         ರಾಮಮಂದಿರದ ಕುರಿತು ಪ್ರಸ್ತಾಪಿಸಿದರೆ ಜನರು, ಇಲ್ಲಿಯವರೆಗೆ ಸರ್ಕಾರವೇನು ಕ್ರಮ ಕೈಗೊಂಡಿದೆ. ದೇಗುಲ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಿಲ್ಲವೇಕೆ ಎಂದು ಪ್ರಶ್ನಿಸುತ್ತಾರೆ. ಇದು ನಾಯಕರ ಬಾಯಿ ಕಟ್ಟಿಹಾಕಿದೆ ಎಂದು ದೇಗುಲ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿರುವ ಮಹಂತ್ ಪರಮಹಂಸ ದಾಸ್ ಅಭಿಪ್ರಾಯಪಟ್ಟಿದ್ದಾರೆ.

       ವಿಎಚ್ ಪಿ ರಾಷ್ಟ್ರೀಯ ಉಪಾಧ್ಯಕ್ಷ ಚಂಪತ್ ರೈ ಪ್ರಕಾರ, ದೇಗುಲ ನಿರ್ಮಾಣ ಎಂದಿಗೂ ತಮ್ಮ ಅಜೆಂಡಾ ಆಗಿರಲೇ ಇಲ್ಲ. ಸದ್ಯಕ್ಕೆ ರಾಷ್ಟ್ರೀಯತೆ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವುದು ತಮ್ಮ ಗುರಿ. ರಾಷ್ಟ್ರೀಯತೆಯ ಸಿದ್ಧಾಂತ ಹೊಂದಿರುವ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾತ್ರ ದೇಗುಲ ನಿರ್ಮಾಣ ಸಾಧ್ಯ ಎನ್ನುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap