ಬಿಜೆಪಿಯ ರಾಷ್ಟ್ರೀಯತಾವಾದ ಹುರುಳಿಲ್ಲದ ಸಿದ್ಧಾಂತ : ಮಹುವಾ ಮೋಯಿತ್ರಾ

ನವದೆಹಲಿ

    ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೋಯಿತ್ರಾ, ಬಿಜೆಪಿಯ ರಾಷ್ಟ್ರೀಯತಾವಾದವನ್ನು ‘ಹುರುಳಿಲ್ಲದ, ಪರಕೀಯರನ್ನು ದ್ವೇಷಿಸುವ ಹಾಗೂ ಸಂಕುಚಿತ ಸಿದ್ಧಾಂತ ’ ಎಂದು ಟೀಕಿಸಿದರು.

    ಲೋಕಸಭೆಯಲ್ಲಿ ಇಂದು ನಡೆದ ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಈ ಸಂಸತ್ತು ವಿಪಕ್ಷಗಳಿಗೆ ಸೇರಿದ್ದು, ಅದನ್ನು ಪಡೆದುಕೊಳ್ಳಲು ಮುಂದಿನ ಚುನಾವಣೆಯಲ್ಲಿ ತಾವು ಪ್ರಯತ್ನ ನಡೆಸಲಿದ್ದೇವೆ ಎಂದರು.

     ಕೆಲ ವಿದ್ಯುನ್ಮಾನ ಮಾಧ್ಯಮಗಳು ಆಡಳಿತ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದ ಅವರು, ಈ ಬಾರಿಯ ಚುನಾವಣೆಯನ್ನು ವಾಟ್ಸ್ ಆ್ಯಪ್ ಹಾಗೂ ನಕಲಿ ಸುದ್ದಿಗಳ ಆಧಾರದ ಮೇಲೆ ನಡೆಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸರ್ಕಾರದ ವಿರುದ್ಧ ಯಾವುದೇ ಸುದ್ದಿಗಳನ್ನು ಭಿತ್ತರವಾಗದಂತೆ ನೋಡಿಕೊಳ್ಳಲು ಜನರನ್ನು ನಿಯೋಜಿಸಿದೆ ಎಂದು ಅರೋಪಿಸಿದರು.

     ಈ ಸಂದರ್ಭದಲ್ಲಿ ತೆಲಗು ದೇಶಂ ಪಕ್ಷದ (ಟಿಡಿಪಿ) ಸದಸ್ಯ ಜಯದೇವ್ ಗಲ್ಲ ಅವರು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯವನ್ನು ಪ್ರಸ್ತಾಪಿಸಿದರು. ಈ ಹಿಂದೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದಕ್ಕೆ ಟಿಡಿಪಿ ಎನ್ ಡಿಎ ಯನ್ನು ತೊರೆದು ಹೊರಬಂದಿತ್ತು. ಈಗ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಶಿಕ್ಷೆ ನೀಡಿದ್ದು, ಪಕ್ಷ ಶೇ.1ರಷ್ಟು ಕೂಡ ಮತಪ್ರಮಾಣ ಗಳಿಸಲು ವಿಫಲರಾಗಿದ್ದಾರೆ ಎಂದರು.

      ಇತ್ತೀಚೆಗೆ ನಾಲ್ವರು ಟಿಡಿಪಿ ಸಂಸದರು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಜಯದೇವ್, ಎಲ್ಲಾ ಪಕ್ಷಗಳು ಬಿಜೆಪಿ ಸೇರಬೇಕು ಎಂಬುದು ತಮ್ಮ ಬಯಕೆಯೇ. ಇದನ್ನೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನಬಹುದೇ ಎಂದು ವ್ಯಂಗ್ಯವಾಡಿದ್ದರು.

     ಡಿಎಂಕೆ ಸದಸ್ಯ ದಯಾನಿಧಿಮಾರನ್ ಚರ್ಚೆಯಲ್ಲಿ ಪಾಲ್ಗೊಂಡು ತಮಿಳುನಾಡಿನ ನೀರಿನ ಸಮಸ್ಯೆ ಕುರಿತು ವಿವರಿಸಿದರು. ಈ ವರ್ಷದ ಮುಂಗಾರು ಕಳೆದ 65 ವರ್ಷಗಳಲ್ಲೇ ಅತಿ ಕಡಿಮೆಯಾಗಿದ್ದು, ಚೆನ್ನೈಗೆ ನೀರು ಪೂರೈಸುತ್ತಿದ್ದ ನಾಲ್ಕು ಜಲಾಶಯಗಳಲ್ಲಿನ ನೀರಿನ ಮಟ್ಟ ಶೇ.1ಕ್ಕೂ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap