ನವರಾತ್ರಿ ಆಚರಿಸಲು ಸಾಧ್ಯವಾಗಿಲ್ಲ ಎಂದು ನೊಂದ ಮಹಿಳೆ ಆತ್ಮಹತ್ಯೆ

ಉತ್ತರಪ್ರದೇಶ:

    ಚೈತ್ರ ನವರಾತ್ರಿ  ಆಚರಿಸಲು ಸಾಧ್ಯವಾಗಿಲ್ಲ ಎಂದು ನೊಂದುಕೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪ್ರಿಯಾಂಶಾ ಸೋನಿ (36) ಆತ್ಮಹತ್ಯೆ  ಮಾಡಿಕೊಂಡ ಮಹಿಳೆ. ನವರಾತ್ರಿಯ ಮೊದಲ ದಿನವೇ ಮುಟ್ಟಾಗಿದ್ದರಿಂದ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ ಎಂದು ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಝಾನ್ಸಿ ನಿವಾಸಿಯಾಗಿರುವ ಪ್ರಿಯಾಂಶಾ ಸೋನಿ ಚೈತ್ರ ನವರಾತ್ರಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯನ್ನು ಪೂಜಿಸಲು ತಯಾರಿ ನಡೆಸುತ್ತಿದ್ದಳು. ಇದಕ್ಕಾಗಿ ನವರಾತ್ರಿ ಆಚರಣೆಗಳು ಪ್ರಾರಂಭವಾಗುವ ಒಂದು ದಿನ ಮೊದಲು ಪತಿ ಮುಖೇಶ್ ಬಳಿ ಸೋನಿ ಪೂಜೆಗೆ ಬೇಕಾದ ವಸ್ತುಗಳನ್ನು ತರಿಸಿಕೊಂಡಿದ್ದಳು.

   ಹೂವು, ಹಣ್ಣು, ಸಿಹಿತಿಂಡಿ, ದೀಪಗಳು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ಮುಖೇಶ್ ಪತ್ನಿಗೆ ತಂದುಕೊಟ್ಟಿದ್ದ. ಮಾರ್ಚ್ 30 ರಂದು ಅಂದರೆ ನವರಾತ್ರಿಯ ಮೊದಲ ದಿನವೇ ಸೋನಿಗೆ ಋತುಚಕ್ರವಾಯಿತು. ಇದರಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವಳಿಗೆ ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವರ ಕೆಲಸ ಮಾಡಬಾರದು ಎನ್ನುವ ನಂಬಿಕೆ ಇದೆ. ಇದರಿಂದ ನೊಂದಿದ್ದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

    ಚೈತ್ರ ನವರಾತ್ರಿ ಆಚರಣೆಗಾಗಿ ಸೋನಿ ಒಂದು ವರ್ಷದಿಂದ ಕಾಯುತ್ತಿದ್ದಳು. ಆದರೆ ಆಚರಣೆ ಸಮಯ ಬಂದಾಗ ಋತುಚಕ್ರದ ಕಾರಣದಿಂದಾಗಿ ಪೂಜೆ ಮಾಡಲು ಸಾಧ್ಯವಾಗಿಲ್ಲ ಎಂದು ಸೋನಿ ಗಂಡನಲ್ಲಿ ಹೇಳಿದ್ದಳು. ಆಕೆಯನ್ನು ಮುಖೇಶ್ ಸಮಾಧಾನ ಪಡಿಸಲು ಯತ್ನಿಸಿದ್ದ. ಆದರೂ ಅವಳು ಸಮಾಧಾನಗೊಂಡಿಲ್ಲ. ಕೊನೆಗೆ ಅವಳ ಪರವಾಗಿ ಮುಖೇಶ್ ಎಲ್ಲಾ ಆಚರಣೆಗಳನ್ನು ಮಾಡಲು ಮುಂದಾದರೂ ಆಕೆ ದುಃಖಿತಳಾಗಿದ್ದಳು.

    ಮುಖೇಶ್ ಕೆಲಸಕ್ಕೆ ಹೋದ ಬಳಿಕ ಆಕೆ ಅಳಲು ಪ್ರಾರಂಭಿಸಿದಳು. ಹೀಗಾಗಿ ಆತ ಅರ್ಧದಿಂದ ಕೆಲಸ ಬಿಟ್ಟು ಬಂದಿದ್ದ. ಮರುದಿನ ಮತ್ತೆ ಆತ ಕೆಲಸಕ್ಕೆ ಹೋದಾಗ ಆಕೆ ವಿಷ ಸೇವಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗ ಅಕೆ ನಾನು ತಪ್ಪು ಮಾಡಿದೆ ಎಂದು ಪದೇ ಪದೇ ಮುಖೇಶ್ ಬಳಿ ಹೇಳುತ್ತಿದ್ದಳು. ಅವಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಪೋಷಕರ ಬಳಿ ಕರೆದುಕೊಂಡು ಹೋದ ಮುಖೇಶ್, ಸ್ಥಳ ಬದಲಾವಣೆಯಿಂದ ಅವಳ ಆರೋಗ್ಯ ಬಹುಬೇಗನೆ ಸುಧಾರಿಸುತ್ತದೆ ಎಂದುಕೊಂಡಿದ್ದ. ಆದರೆ ಅವಳ ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು.

  ವಾಂತಿ ಮಾಡಲು ಪ್ರಾರಂಭಿಸಿದಳು, ಬೆನ್ನುನೋವು ಎಂದು ಹೇಳಿದಳು. ಅದು ಮುಟ್ಟಿನ ಕಾರಣದಿಂದಾಗಿ ಎಂದು ಮುಖೇಶ್ ಭಾವಿಸಿದ್ದ. ಬಳಿಕ ಆಕೆಯನ್ನು ನಾಗರಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಧ್ಯಾಹ್ನ ಮುಖೇಶ್ ಬಳಿ ನೀವು ಏನಾದರೂ ತಿನ್ನಿ. ನನಗೆ ಹಸಿವಿಲ್ಲ ಎಂದು ಹೇಳಿದಳು. ಆಸ್ಪತ್ರೆಯಲ್ಲಿ ಅವಳನ್ನು ಒಂಟಿಯಾಗಿ ಬಿಡಲು ಮುಖೇಶ್ ನಿರಾಕರಿಸಿದಾಗ ಅವಳು ಆತನನ್ನು ಜ್ಯೂಸ್ ತರಲು ಹೇಳಿ ಕಳುಹಿಸಿದಳು. 

   ತಾನು ಹಿಂತಿರುಗುವ ಹೊತ್ತಿಗೆ ಸೋನಿಯನ್ನು ಆಮ್ಲಜನಕದ ಬೆಂಬಲಕ್ಕೆ ಒಳಪಡಿಸಲಾಯಿತು. ಇದಾಗಿ 15- 20 ನಿಮಿಷಗಳಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಮುಖೇಶ್ ತಿಳಿಸಿದ್ದಾರೆ. ಸೋನಿ ಮತ್ತು ಮುಖೇಶ್ ದಂಪತಿಗೆ 3 ಮತ್ತು ಎರಡು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.