ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗದಿಂದ ನ್ಯಾಯಾಂಗ ನಿಂದನೆ ಅರ್ಜಿ…!

ಬೆಂಗಳೂರು:

    ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ನಡೆಗೆ ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗವು ಸೋಮವಾರ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

   ಆಯೋಗದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

   ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲು ಸಲ್ಪ ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ಮಾಡಿದ ಮನವಿ ಪುರಸ್ಕರಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.

   ಇದಕ್ಕೂ ಮುನ್ನ, ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಈ ಹಿಂದೆ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಅಂತಿಮಗೊಳಿಸಿಲ್ಲ. ಇದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ವಿವರಿಸಿದರು. 

   ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಈ ವಿಚಾರವಾಗಿ ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಆ ಮನವಿ ಪರಿಗಣಿಸಿದ ಪೀಠವು ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

   ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹಾಗೂ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

   ಅರ್ಜಿಯು 2023ರ ಡಿಸೆಂಬರ್‌ 19ರಂದು ವಿಚಾರಣೆ ಬಂದಿದ್ದ ವೇಳೆ ಸರ್ಕಾರಿ ವಕೀಲರು ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಚುನಾವಣೆ ನಡೆಸಲು ಮೀಸಲು ಮತ್ತು ಕ್ಷೇತ್ರ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು 2023ರ ಡಿಸೆಂಬರ್‌ 19 ಪ್ರಕಟಿಸಲಾಗುವುದು. ಮುಂದಿನ ಏಳು ದಿನಗಳಲ್ಲಿ ಕೊಡಗು ಜಿಲ್ಲೆಯ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದರು.

   ಅಲ್ಲದೆ, ಅದಾದ ಏಳು ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು. ಅದಾದ ಎರಡು ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ಸರ್ಕಾರಿ ವಕೀಲರು ತಿಳಿಸಿದ್ದರು.

   ಈ ಹೇಳಿಕೆ ದಾಖಲಿಸಿಕೊಂಡು ಅರ್ಜಿ ಇತ್ಯರ್ಥಪಡಿಸಿದ್ದ ಹೈಕೋರ್ಟ್‌, ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ಸರ್ಕಾರ ನಡೆದುಕೊಳ್ಳದಿದ್ದರೆ ಪುನಾ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆಯೋಗಕ್ಕೆ ತಿಳಿಸಿತ್ತು. ಇದೀಗ ಪುನಾ ಹೈಕೋರ್ಟ್‌ ಮೆಟ್ಟಿಲೇರಿರುವ ಆಯೋಗ, ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ರಾಜ್ಯ ಸರ್ಕಾರ ನಡೆದುಕೊಂಡಿಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅಂತಿಮಗೊಳಿಸಿಲ್ಲ. ಇದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap