ಕೊಚ್ಚಿ:
ವಿಷಾಹಾರ ಸೇವನೆಯಿಂದ ಸುಮಾರು 75 ವಿದ್ಯಾರ್ಥಿಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ತೃಕ್ಕಾಕರ ಎನ್‌ಸಿಸಿ ಶಿಬಿರದಲ್ಲಿ ಕೇರಳದ ವಿವಿಧ ಕಾಲೇಜುಗಳ ಸುಮಾರು 600 ಕೆಡೆಟ್‌ಗಳು ಪಾಲ್ಗೊಂಡಿದ್ದು, ಅವರಲ್ಲಿ75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ತಗೊಂಡಿದ್ದು, ಮಂಗಳವಾರ ಮುಂಜಾನೆ NCCಕ್ಯಾಂಪ್ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ತೃಕ್ಕಾಕರದ ಕೆಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್‌ಸಿಸಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸೋಮವಾರ(ಡಿ.23) ಸಂಜೆ ಅತಿಸಾರದ ಲಕ್ಷಣಗಳು ಕಾಣಿಸಿಕೊಂಡಿದೆ. ತಕ್ಷಣವೇ ಅವ ಕಲಮಸ್ಸೆರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇತರ ಎರಡು ಆಸ್ಪತ್ರೆಗಳಿಗೆ ಅವರನ್ನು ಕರೆದೊಯ್ಯಲಾಗಿದೆ. ಶಿಬಿರದಲ್ಲಿ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 75 ವಿದ್ಯಾರ್ಥಿಗಳಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿರುವುದಾಗಿದ್ದಾರೆ ಎನ್ನಲಾಗಿದೆ.
ತೀವ್ರ ಹೊಟ್ಟೆ ನೋವು, ನಿಶ್ಯಕ್ತಿ ಮತ್ತು ಅತಿಸಾರ ಸೇರಿದಂತೆ ಹಲವು ಅನಾರೋಗ್ಯದ ಲಕ್ಷಣಗಳು ಸೋಮವಾರ ಮಧ್ಯಾಹ್ನ ಕಾಣಿಸಿಕೊಳ್ಳಲಾರಂಭಿಸಿವೆ. ಸಂಜೆಯ ಹೊತ್ತಿಗೆ ಅನೇಕ ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ. ಅಸ್ವಸ್ಥಗೊಂಡ ಕೆಡೆಟ್‌ಗಳನ್ನು ಎರ್ನಾಕುಲಂ ಸರ್ಕಾರಿ ವೈದ್ಯಕೀಯ ಕಾಲೇಜು, ಕಲಮಸ್ಸೆರಿ ಮತ್ತು ಎರಡು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅದೃಷ್ಟವಶಾತ್, ಎಲ್ಲಾ ಕೆಡೆಟ್‌ಗಳ ಆರೋಗ್ಯ ಸ್ಥಿತಿಯು ಸದ್ಯಕ್ಕೆ ಉತ್ತಮವಾಗಿದೆ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾಲೇಜಿನಲ್ಲಿ ನೀಡುತ್ತಿರುವ ಆಹಾರ ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಯಾವುದೇ ವಿದ್ಯಾರ್ಥಿಗಳಿಗೂ ಪ್ರಾಣ ಹಾನಿಯಾಗಿಲ್ಲ ಎಂದು ತೃಕ್ಕಾಕರ ಪುರಸಭೆಯ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.ವಿದ್ಯಾರ್ಥಿಗಳು ಸಾಮೂಹಿಕವಾಗಿ ಆಸ್ಪತ್ರೆಗೆ ದಾಖಲಾದ ನಂತರ ಪೋಷಕರು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಎನ್‌ಸಿಸಿ ಕ್ಯಾಂಪ್ ಅನ್ನು ಸ್ಥಗಿತಗೊಳಿಸಲಾಯಿತು ಎಂದು ತೃಕ್ಕಾಕರ ಪುರಸಭೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊಚ್ಚಿಯ ಪೊನ್ನುರುನ್ನಿ ಅಂಗನವಾಡಿಯಲ್ಲಿ 15 ಮಕ್ಕಳು ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದ ಮಧ್ಯೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಳೆದ ತಿಂಗಳಷ್ಟೇ ಕಾಸರಗೋಡಿನಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ನಗರದ ವಿವಿಧ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆದ ಘಟನೆಯ ಕುರಿತು ವರದಿಯಾಗಿತ್ತು. ಅಲಂಪಾಡಿ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಗಿದ್ದು, ಸಂಜೆ ಮನೆಗೆ ಬಂದ ವಿದ್ಯಾರ್ಥಿಗಳು ವಾಂತಿ ಹಾಗೂ ಇನ್ನಿತರ ರೀತಿಯಲ್ಲಿ ಅಸ್ವಸ್ಥತೆ ಕಂಡು ಬಂದಿದ್ದು, ವಿದ್ಯಾರ್ಥಿಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ, ಚೆಂಗಳ ಸಹಕಾರಿ ಆಸ್ಪತ್ರೆ ಹಾಗೂ ವಿದ್ಯಾನಗರ, ಕಾಸರಗೋಡು ನಗರದ ವಿವಿಧ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿತ್ತು.








