ಪಾದಯಾತ್ರೆ ಯಶಸ್ಸಿಗಾಗಿ ತಾಯಿ ಚಾಮುಂಡೇಶ್ವರಿ ಮೊರೆ ಹೋದ NDA ….!

ಚಾಮುಂಡಿ ಬೆಟ್ಟ

     ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಡಳಿತಾರೂಢ ಕಾಂಗ್ರೆಸ್​ ಸರ್ಕಾರ ಅಕ್ರಮ ಎಸಗಿದೆ ಎಂದು ಆರೋಪಿಸಿ ಇಂದು ಶನಿವಾರ ಬಿಜೆಪಿ-ಜೆಡಿಎಸ್​ ಜಂಟಿಯಾಗಿ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಚಾಲನೆ ನೀಡಲಿದೆ.

    ಪಾದಯಾತ್ರೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮೈಸೂರು ಚಾಮುಂಡೇಶ್ವರಿ ಸನ್ನಿಧಿಗೆ ಕುಟುಂಬಸ್ಥರೊಂದಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿತಾಯಿ ಬಳಿ ಪ್ರಾರ್ಥಿಸಿದ್ದೇನೆ. ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿದಿದೆ. ಆದರೆ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಸರ್ಕಾರ ದ್ರೋಹ ಬಗೆದಿದೆ.

     ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತುಳಿತಕ್ಕೊಳಗಾದವರಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಸೈಟ್ ಹಗರಣ, ಎಸ್ ಸಿಪಿ, ಟಿಎಸ್ ಪಿ ಹಣ ದುರ್ಬಳಕೆ ಖಂಡಿಸಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.

ಮೈಸೂರು ಚಲೋ: 

     ಮೈಸೂರು ಚಲೋ ಪಾದಯಾತ್ರೆ ಇಂದು ಕೆಂಗೇರಿಯ ಕೆಂಪಮ್ಮ ದೇಗುಲದಿಂದ ಆರಂಭವಾಗಿ ಆಗಸ್ಟ್ 10ರಂದು ಮುಕ್ತಾಯವಾಗಲಿದೆ. ಪ್ರತಿದಿನ 20 ಕಿಲೋ ಮೀಟರ್​​ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆಯಲ್ಲಿ 224 ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇಂದು 8 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಂದೊಂದು ದಿನ ಒಂದೊಂದು ಮೋರ್ಚಾದವರು ಭಾಗಿಯಾಗುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ತಂಡ ಭಾಗಿಯಾದರೆ, ಮಧ್ಯಾಹ್ನದಿಂದ ಸಂಜೆಯವರೆಗೆ ಮತ್ತೊಂದು ತಂಡ ಭಾಗಿಯಾಗುತ್ತದೆ. ಪಾದಯಾತ್ರೆ ಯಶಸ್ವಿಗೆ ಎರಡು ಪಕ್ಷಗಳಿಂದ ಸಮನ್ವಯ ತಂಡ ರಚಿಸಲಾಗಿದೆ.

ವೈಯಕ್ತಿಕ ದ್ವೇಷವಲ್ಲ:

   ನಿನ್ನೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿಜಯೇಂದ್ರ, ಪಾದಯಾತ್ರೆಯು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಲು ಅಲ್ಲ, ಆದರೆ ಭ್ರಷ್ಟ, ಬಡವರು ಮತ್ತು ದಲಿತರ ಸೌಲಭ್ಯಗಳನ್ನು ಕಸಿದುಕೊಳ್ಳುವ ವ್ಯವಸ್ಥೆಯ ವಿರುದ್ಧವಾಗಿದೆ. 

    ಪ್ರತಿನಿತ್ಯ ಸುಮಾರು 8,000 ರಿಂದ 10,000 ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪಾದಯಾತ್ರೆ ನಿತ್ಯ 16-22 ಕಿ.ಮೀ ಕ್ರಮಿಸಲಿದ್ದು, ಬಿಡದಿ, ಕೆಂಗಲ್, ನಿಡಘಟ್ಟ, ಮಂಡ್ಯ, ತೂಬಿನಕೆರೆ, ಶ್ರೀರಂಗಪಟ್ಟಣ ಮೂಲಕ ಸಂಚರಿಸಿ ಮೈಸೂರಿನಲ್ಲಿ ಸಮಾಪನಗೊಳ್ಳಲಿದೆ ಎಂದರು.

    ಇತ್ತೀಚಿಗೆ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಯವರು ಎತ್ತಿದ್ದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. ಅವರು ನಮ್ಮ ಪ್ರಶ್ನೆಗಳಿಂದ ಓಡಿಹೋಗುತ್ತಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಇಲ್ಲದೆ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಈಗ ರಾಜ್ಯಪಾಲರನ್ನು ಪ್ರಶ್ನಿಸುತ್ತಿರುವುದು ಸರಿಯಲ್ಲ. ಈ ರ್ಯಾಲಿ ಒಬ್ಬ ವ್ಯಕ್ತಿಯ ವಿರುದ್ಧ ಅಲ್ಲ, ಇಡೀ ಭ್ರಷ್ಟ ವ್ಯವಸ್ಥೆಯ ವಿರುದ್ಧ. ಬಡವರು ಮತ್ತು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೋಸ ಹೋಗಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿದರು.

     ಎನ್‌ಡಿಎ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ನ ಜನಾಂದೋಲನ ಅಭಿಯಾನದ ಕುರಿತು ಮಾತನಾಡಿದ ವಿಜಯೇಂದ್ರ, ಕರ್ನಾಟಕದ ಜನತೆಗಾಗಿ ತಾವು ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಡಲು ಕಾಂಗ್ರೆಸ್ ಆ ಯಾತ್ರೆಯನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.