ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಪದವಿ ಬಾಗಿಲು ಬಂದ್ ?

ತುಮಕೂರು:


     ಶೈಕ್ಷಣಿಕ ವರ್ಷ ಹಾಳಾಗುವ ಭಯದಲ್ಲಿ ವಿದ್ಯಾರ್ಥಿಗಳು-ಪೋಷಕರು

ತುಮಕೂರು ವಿವಿ ವ್ಯಾಪ್ತಿಗೊಳಪಡುವ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ವರ್ಷದ ಪದವಿ ಪ್ರವೇಶಕ್ಕಿದ್ದ ಕೊನೆ ದಿನಾಂಕ ಮುಗಿದ ನಂತರವೂ ಪ್ರತಿದಿನ ನೂರಾರು ವಿದ್ಯಾರ್ಥಿಗಳು ದಾಖಲಾತಿಗಾಗಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಆದರೇ ದಾಖಲಾತಿಗಿದ್ದ ಕೊನೆ ದಿನಾಂಕ ನ.8 ಈಗಾಗಲೇ ಮುಗಿದಿದ್ದು, ನೀಟ್ ಮತ್ತು ಸಿಇಟಿ ಫಲಿತಾಂಶಕ್ಕಾಗಿ ಕಾದು, ಅಲ್ಲಿ ಅವಕಾಶ ಸಿಗದ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ದಾಖಲಾಗಲು ಪರದಾಡುತ್ತಿದ್ದು, ಈ ಸಾಲಿನ ಶೈಕ್ಷಣಿಕ ವರ್ಷ ಕೈ ತಪ್ಪುವ ಆತಂಕದಲ್ಲಿದ್ದಾರೆ.

ಶೈಕ್ಷಣಿಕ ಭವಿಷ್ಯದ ಚಿಂತೆ :

ವಿದ್ಯಾರ್ಥಿ ಜೀವನದಲ್ಲಿ ಒಂದು ವರ್ಷದ ಶೈಕ್ಷಣಿಕ ಅವಧಿಯು ಬಹುದೊಡ್ಡದು. ಕೊರೊನಾ ಪರಿಣಾಮದಿಂದಾಗಿ ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಗಂಭೀರವಾದ ತರಗತಿಗಳೇ ನಡೆದಿಲ್ಲ. ಈ ನಡುವೆ ನೀಟ್, ಸಿಇಟಿ ಪರೀಕ್ಷೆ ಬರೆದು ವೈದ್ಯ, ದಂತವೈದ್ಯ, ಪಶುವೈದ್ಯ, ಆಯುರ್ವೇದಿಕ್, ಎಂಜಿನಿಯರಿಂಗ್, ಮೊದಲಾದ ಕೋರ್ಸುಗಳನ್ನು ಓದಲು ಇಚ್ಛಿಸಿ ಅಲ್ಲಿ ತಮಗಿಷ್ಟದ ಸೀಟು ದೊರೆಯದೆ ಇರುವುದು ಹಾಗೂ ತಾವು ಅಪೇಕ್ಷಿಸಿದ ಊರು, ಕಾಲೇಜುಗಳಲ್ಲಿ ಸೀಟು ಲಭ್ಯವಿರದಿರುವುದು ಮೊದಲಾದ ಕಾರಣಗಳಿಂದಾಗಿ ಈ ವಿದ್ಯಾರ್ಥಿಗಳು ಪದವಿಗೆ ಪ್ರವೇಶ ಪಡೆದು ಬಿಎಸ್‍ಸಿ, ಬಿಕಾಂ ಕೋರ್ಸ್‍ಗಳನ್ನು ಓದಲು ಮುಂದಾಗಿದ್ದಾರೆ. ಆದರೇ ಪದವಿ ಪ್ರವೇಶಕಿದ್ದ ಕೊನೆ ದಿನಾಂಕ ಮುಗಿದಿದ್ದು, ವಿದ್ಯಾರ್ಥಿಗಳು ಒಂದು ವರ್ಷ ಶೈಕ್ಷಣಿಕ ಭವಿಷ್ಯ ಹಾಳಾಗುವ ಆತಂಕದಲ್ಲಿದ್ದಾರೆ.

ಖಾಸಗಿಯಲ್ಲಿ ದುಬಾರಿ ಶುಲ್ಕ :

ವಿವಿಯಲ್ಲಿ ಪದವಿಗೆ ಅವಕಾಶ ಸಿಗಲಿಲ್ಲವೆಂದು ಕೆಲವು ಪೋಷಕರು ಖಾಸಗಿ ಕಾಲೇಜುಗಳ ಕಡೆ ಮುಖಮಾಡಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕವಿದ್ದು, ಬಿಸಿಎ ಕೋರ್ಸ್‍ಗೆ ಸೇರಬೇಕೆಂದರೆ ಒಂದು ಲಕ್ಷ ರೂ. ವರೆಗೂ ಶುಲ್ಕ ಕಟ್ಟಬೇಕಾದ ಪರಿಸ್ಥಿತಿಯಿದೆ. ಉಳ್ಳವರು ದುಬಾರಿ ಶುಲ್ಕ ಪಾವತಿಸಿ ತಮ್ಮ ಮಕ್ಕಳನ್ನು ಖಾಸಗಿ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೇ ದುಬಾರಿ ಶುಲ್ಕ ಪಾವತಿಸಲಾಗದ ಬಡವರ ಪಾಲಿಗೆ ಸರ್ಕಾರಿ ಕಾಲೇಜುಗಳೆ ಅಕ್ಷರ ಅಕ್ಷಯ ಪಾತ್ರೆಗಳು ಎಂಬುದನ್ನು ವಿವಿ ಆಡಳಿತಗಾರರು ಮರೆಯಬಾದು ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನೂ ಉಳಿದಿವೆ ಸೀಟುಗಳು :

ಸರ್ಕಾರಿ ಪ್ರಮಮ ದರ್ಜೆ ಕಾಲೇಜುಗಳಲ್ಲಿ ಇನ್ನೂ ಸಾಕಷ್ಟು ಸೀಟುಗಳು ಉಳಿದಿದ್ದು, ಈ ಸೀಟುಗಳನ್ನು ಪದವಿಗೆ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ನೀಡಿದರೇ ಅವರಿಗೂ ಅನುಕೂಲವಾಗಿ ಒಂದು ವರ್ಷ ಹಾಳಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ವಿವಿಯು ಪದವಿ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಚೌಕಾಸಿ ಮಾಡಬಾರದೆಂದು ಶೈಕ್ಷಣಿಕ ವಲಯದ ಚಿಂತಕರು ಆಗ್ರಹಿಸಿದ್ದಾರೆ.

ತುರ್ತು ಸಿಂಡಿಕೇಟ್ ಸಭೆ, ಶೀಘ್ರ ಅವಕಾಶ…? :

ಪದವಿಗೆ ಅವಕಾಶ ಸಿಗದವರು ವಿವಿಗೆ ಕೂಡಲೇ ಅರ್ಜಿ ಕೊಟ್ಟರೆ, ವಿವಿಯು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿಶೇಷ ಸಿಂಡಿಕೇಟ್ ಸಭೆ ಕೆರದು ತುರ್ತು ನಿರ್ಧಾರ ಕೈ ಗೊಳ್ಳಬೇಕಾಗುತ್ತದೆ. ಶೀಘ್ರದಲ್ಲೆ ವಿವಿಯ ಸಿಂಡಿಕೇಟ್ ಸಭೆಯಿದ್ದು, ಪದವಿಗೆ ಪ್ರವೇಶಾತಿ ಸಿಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗುವುದು.


  -ಟಿ.ಎಸ್.ಸುನಿಲ್‍ಪ್ರಸಾದ್, ಸಿಂಡಿಕೇಟ್ ಸದಸ್ಯರು

5 ಬಾರಿ ದಿನಾಂಕ ವಿಸ್ತರಣೆ : ಕೊರೋನಾ ಪರಿಣಾಮ ಹಾಗೂ ನೂತನವಾಗಿ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಗೊಂದಲದಿಂದ ವಿವಿಯು ಈಗಾಗಲೇ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪದವಿ ಪ್ರವೇಶಕ್ಕಿದ್ದ ಕೊನೆ ದಿನಾಂಕವನ್ನು ವಿವಿಯು ಈಗಾಗಲೇ ಐದು ಬಾರಿ ವಿಸ್ತರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿತು. ಆದರೇ ನೀಟ್ ಮತ್ತು ಸಿಇಟಿಯಲ್ಲಿ ಸೀಟು ಸಿಗಬಹುದೆಂದು ಕಾದು, ಕಾರಣಾಂತರಗಳಿಂದ ಅಲ್ಲಿ ಸೀಟು ಸಿಗದೆ ಪದವಿಗೆ ದಾಖಲಾಗಲು ಬಂದಿರುವ ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ಭವಿಷ್ಯ ಹಾಳಾಗದಂತೆ ತಡೆಯಲು ವಿವಿಯು ಈ ವಿದ್ಯಾರ್ಥಿಗಳಿಗೂ ಪದವಿಗೆ ಪ್ರವೇಶ ನೀಡಿ, ವಿದ್ಯಾರ್ಥಿ ಸ್ನೇಹಿ ಕ್ರಮವನ್ನು ಎತ್ತಿ ಹಿಡಿಯಲಿ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಜೊತೆಗೆ ನೀಟ್, ಸಿಇಟಿ ಪರೀಕ್ಷಾ ಫಲಿತಾಂಶ ಬಂದು ಸಾಕಷ್ಟು ದಿನಗಳೇ ಕಳೆದಿವೆ ಹಾಗೂ ಪದವಿ ಪ್ರವೇಶದ ಕೊನೆ ದಿನಾಂಕವನ್ನು 5 ಬಾರಿ ವಿಸ್ತರಿಸಲಾಗಿದೆ ಆದರೂ ವಿದ್ಯಾರ್ಥಿಗಳು ಮತ್ತು ಪೋಷಕರು ಪದವಿ ಕೋರ್ಸ್‍ಗಳಿಗೆ ದಾಖಲಾಗಲು ಸೊಂಬೇರಿತನ ತೋರಿರುವುದು ಅಕ್ಷಮ್ಯ ಎಂಬ ಮಾತುಗಳು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿವೆ.

ನೀಟ್, ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಕಡಿಮೆ ಬಂದಿದ್ದರಿಂದ ವೃತ್ತಿ ಶಿಕ್ಷಣ ಕೋರ್ಸ್‍ಗಳತ್ತ ಹೋಗಲು ಆಗಲಿಲ್ಲ. ಈಗ ಬಿಎಸ್ಸಿ ಪದವಿ ಓದಬೇಕೆಂದಿದ್ದೇನೆ. ಆದರೇ ಪದವಿ ಪ್ರವೇಶಾತಿಗೆ ಕೊನೆ ದಿನಾಂಕ ಮುಗಿದಿದ್ದು ಆತಂಕ ಕಾಡುತ್ತಿದೆ.
-ಪದವಿ ಪ್ರವೇಶ ಸಿಗದ ವಿದ್ಯಾರ್ಥಿ

ನನ್ನ ಮಗನನ್ನು ಮೆಡಿಕಲ್‍ಗೆ ಕಳುಹಿಸಬೇಕು ಅಂದುಕೊಂಡಿದ್ದೆ, ಆದರೇ ನೀಟ್‍ನಲ್ಲಿ ಸೀಟು ಸಿಗಲಿಲ್ಲ. ಮಗ ಈಗ ಬಿಎಸ್ಸಿ ಓದುತ್ತೇನೆ ಅನ್ನುತ್ತಿದ್ದಾನೆ. ಗೌರ್ಮೆಂಟ್ ಡಿಗ್ರಿ ಕಾಲೇಜಿನಲ್ಲಿ ವಿಚಾರಿಸಿದರೇ ಟಡ್ಮಿಷನ್‍ಗೆ ಕೊನೆದಿನ ಮುಗಿದಿದೆ ಎನ್ನುತ್ತಿದ್ದಾರೆ. ಯೂನಿವರ್ಸಿಟಿಯವರು ಪ್ರವೇಶ ಸಿಗದ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಅವಕಾಶ ಕೊಟ್ಟರೆ ಅವರ ಶೇಕ್ಷಣಿಕ ಹಿತದೃಷ್ಠಿಯಿಂದ ಅನುಕೂಲವಾಗುತ್ತದೆ.
  -ನಾಗರಾಜು, ಪೋಷಕರು

ನಮಗೂ ನೀಟ್ ಗೂ ಸಂಬಂಧವಿಲ್ಲ  ಪದವಿ ಪ್ರವೇಶಾತಿಗೆ ಇದ್ದ ಕೊನೆ ದಿನಾಂಕವನ್ನು ಈಗಾಗಲೇ ಒಂದು ತಿಂಗಳಷ್ಟು ವಿಸ್ತರಿಸಲಾಗಿತ್ತು. ವಿವಿಯ ಕಾಲೇಜುಗಳು ಆರಂಭವಾಗಿ ಈಗಾಗಲೇ ಒಂದೂವರೆ ತಿಂಗಳಾಗುತ್ತಾ ಬಂದಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಶೇ.75 ರಷ್ಟು ಹಾಜರಾತಿ ಅವಶ್ಯ. ಸದ್ಯ ಪದವಿ ಪ್ರವೇಶಕ್ಕೆ ಅವಕಾಶ ನೀಡಲು ಯಾವುದೇ ಆಯ್ಕೆಯಿಲ್ಲ.


-ಪ್ರೋ.ವೈ.ಎಸ್.ಸಿದ್ದೇಗೌಡ, ಕುಲಪತಿಗಳು, ತುಮಕೂರು ವಿವಿ

  -ಚಿದಾನಂದ್ ಹುಳಿಯಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link