ಬೆಂಗಳೂರು:
ಮೋದಿ ಮೌಢ್ಯ ಪ್ರತಿಪಾದಕರು: ಪ್ರತಿಪಕ್ಷ ನಾಯಕರುಗಳ ವಾಗ್ದಾಳಿ
ಕೊರೋನಾ ಓಡಿಸಲು ಚಪ್ಪಾಳೆ ತಟ್ಟುವಂತೆ, ಶಂಖ, ಜಾಗಟೆ ಬಾರಿಸುವಂತೆ ಹೇಳಿದ ನರೇಂದ್ರ ಮೋದಿ ಅವರಂತಹ ಮೌಢ್ಯದ ಪ್ರತಿಪಾದಕ ಪ್ರಧಾನಿ ಮತ್ತೊಬ್ಬರಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪಂಡಿತ್ ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಹಾಗೂ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಂಡಿತ್ ಜವಾಹರಲಾಲ್ ನೆಹರು ವೈಜ್ಞಾನಿಕ ಮನೋಭಾವನೆ ಹೊಂದಿದ್ದ ಅತ್ಯುತ್ತಮ ಪ್ರಧಾನಿಯಾಗಿದ್ದರು. ಆದರೆ ಈಗಿನ ಪ್ರಧಾನಿ ಮೋದಿ ಢೋಂಗಿ, ಅವೈಜ್ಞಾನಿಕ ಮನೋಭಾವದವರು ಎಂದರು.
ನೆಹರು ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದವರು ಮಾತನಾಡುವಾಗ ಸೌಮ್ಯವಾಗಿ ಕುಳಿತು ಕೇಳುತ್ತಿದ್ದರು. ಆದರೆ ಇಂದಿನ ಪ್ರಧಾನಿ ಲೋಕಸಭೆಗೆ ಬರುವುದೇ ಅಪರೂಪ. ಬಂದರೂ ಸದನದಲ್ಲಿ ಸದಸ್ಯರ ಪ್ರಸ್ತಾಪಗಳಿಗೆ ಉತ್ತರ ನೀಡುವುದಿಲ್ಲ. ನೆಹರು ಒಬ್ಬ ಮಾದರಿ ಪ್ರಧಾನಿಯಾಗಿ ಆಡಳಿತ ನಡೆಸಿದರು. ದೇಶದಲ್ಲಿ ವೈಚಾರಿಕತೆ, ವಿಜ್ಞಾನದ ಬೆಳವಣಿಗೆಗೆ ಅವರು ಹೆಚ್ಚು ಮಹತ್ವ ನೀಡಿದ್ದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನೆಹರು ಅವರು 17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ಈ ದೇಶ ಕಟ್ಟಲು ಅವರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರು ಒಬ್ಬ ಮಹಾನ್ ಪ್ರಜಾಪ್ರಭುತ್ವವಾದಿಯಾಗಿದ್ದರು. ಇಂತಹ ನಾಯಕನ ಹೆಸರಿಗೆ ಕಳಂಕ ತರಲು ಬಿಜೆಪಿ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆಗ ತಾನೆ ವಾಜಪೇಯಿ ಅವರು ಲೋಕಸಭೆಗೆ ಪ್ರವೇಶ ಮಾಡಿದ್ದರು. ಒಮ್ಮೆ ನೆಹರು ಅವರು ವಾಜಪೇಯಿ ಅವರನ್ನು ಕುರಿತು ನಿಮಗೆ ಮುಂದೆ ದೇಶದ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದಿದ್ದರೆ ಹೊರತು, ಹೀಗೆ ನೆಹರು ಅವರು ಪ್ರತಿಪಕ್ಷದವರನ್ನು ದ್ವೇಷಿಸುತ್ತಾ ಇರಲಿಲ್ಲ. ಲೋಹಿಯಾ ಅವರು ನೆಹರು ಅವರನ್ನು ಸಾಕಷ್ಟು ಟೀಕೆ ಮಾಡುತ್ತಿದ್ದರೂ ಕೂಡ ಅವರ ಬಗ್ಗೆ ಪ್ರೀತಿ ವಿಶ್ವಾಸ ಇಟ್ಟಿದ್ದರು ಎಂದು ಹೇಳಿದರು.
ದೇಶದ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆಹರು ಅವರು ಕಾರಣ. ಆದರೆ ಮೋದಿ ಅವರ ಕಾಲದಲ್ಲಿ ದೇಶ ಆರ್ಥಿಕವಾಗಿ ದಿವಾಳಿ ಹಂತ ತಲುಪಿದೆ. ಹೀಗಿರುವಾಗ ನರೇಂದ್ರ ಮೋದಿ ಅವರಿಗೆ ನೆಹರು ಅವರ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ? ನಾನು 1978 ರಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ನನ್ನ ರಾಜಕೀಯ ಜೀವನದಲ್ಲೇ ದೇಶವನ್ನು ಇಂತಹ ಆರ್ಥಿಕ ದುಸ್ಥಿತಿಗೆ ಕೊಂಡೊಯ್ದ ಹಾಗೂ ಇಷ್ಟು ಸುಳ್ಳು ಹೇಳುವ ಮಹಾನ್ ಸುಳ್ಳುಗಾರ ಪ್ರಧಾನಿಯನ್ನು ಕಂಡಿಲ್ಲ. ಮೊನ್ನೆ ಮನ್ ಕಿ ಬಾತ್ ನಲ್ಲಿ ಮೋದಿ ಅವರು ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಹೆಚ್ಚಾಗಲು ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಲ ಕಾರಣ ಎಂದು ಹಸಿ ಹಸಿ ಸುಳ್ಳು ಹೇಳಿದರು. ಬೆಕ್ಕು ತಾನು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ, ಜಗತ್ತು ಕಣ್ಣು ಮುಚ್ಚಿಕೊಂಡಿದೆ ಎಂದು ಭ್ರಮಿಸಿದಂತೆ ಮೋದಿ ಕೂಡ ಭ್ರಮೆಯಲ್ಲಿ ಇದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಅಬಕಾರಿ ತೆರಿಗೆಯನ್ನು ಹೆಚ್ಚು ಮಾಡಿರುವುದೇ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಗೆ ಕಾರಣ ಎಂಬ ಸತ್ಯವನ್ನು ಜನ ಅರ್ಥಮಾಡಿಕೊಳ್ಳಬೇಕು. ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಒಟ್ಟು ರೂ. 23 ಲಕ್ಷ ಕೋಟಿ ರೂಪಾಯಿಗಳನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದ ರೂಪದಲ್ಲಿ ಸಂಗ್ರಹಿಸಿದೆ ಎಂದು ಆರೋಪಿಸಿದರು.
ವಾಜಪೇಯಿ ಹಾಗೂ ಮನಮೋಹನ ಸಿಂಗ್ ಅವರ ಸರ್ಕಾರ ಒಟ್ಟು ಖರೀದಿ ಮಾಡಿರುವ ತೈಲ ಬಾಂಡ್ ಮೌಲ್ಯ ಕೇವಲ 1.40 ಲಕ್ಷ ಕೋಟಿ ರೂಪಾಯಿ. ನರೇಂದ್ರ ಮೋದಿ ಅವರು ದೇಶದ ಜನ ಪೆದ್ದರು, ಅವರನ್ನು ಸುಲಭವಾಗಿ ದಾರಿತಪ್ಪಿಸಬಹುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಜನ ದಡ್ಡರಲ್ಲ. ನೆಹರು ಅವರು 1921 ರಿಂದ ಸ್ವಾತಂತ್ರ್ಯ ಸಿಗುವವರೆಗೆ ನಿರಂತರವಾಗಿ ಗಾಂಧೀಜಿಯವರು, ಮೌಲಾನಾ ಆಜಾದ್, ಸುಭಾಷ್ ಚಂದ್ರ ಬೋಸ್ ಅವರ ಜೊತೆಗೂಡಿ ಹೋರಾಟ ಮಾಡಿದ್ದರು. ಇದರಿಂದ ಅವರು ಸುಮಾರು 9 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಸ್ವಾತಂತ್ರ್ಯಾ ನಂತರ ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನೆಹರು ಅವರ ಎದುರು ಎರಡು ಸವಾಲುಗಳಿದ್ದವು.
ಮೊದಲನೆಯದು ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಯಾಗಿ ನೆಲೆಗೊಳಿಸುವುದು, ಎರಡನೆಯದು ದೇಶದ ಏಕತೆಯನ್ನು ಕಾಪಾಡುವುದು. ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ಗಳಿಸಿದ ಅನೇಕ ರಾಷ್ಟ್ರಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಘೋಷಣೆ ಮಾಡಿದ್ದರೂ ಸಹ ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ, ಉಳಿಸಿ ಬೆಳೆಸಿಕೊಂಡು ಹೋಗಿಲ್ಲ ಎಂಬ ಅಂಶವನ್ನು ಇತಿಹಾಸದಲ್ಲಿ ನಾವು ಕಾಣಬಹುದು ಎಂದು ಹೇಳಿದರು.
ಭಾರತವನ್ನು 565 ರಾಜಮನೆತನಗಳು, ಪಾಳೆಗಾರರು, ಅರಸರು ಆಳುತ್ತಿದ್ದರು. ಹೀಗಾಗಿ ಇಲ್ಲಿ ತಾತ್ಕಾಲಿಕವಾಗಿ ಪ್ರಜಾತಂತ್ರ ವ್ಯವಸ್ಥೆಯನ್ನು ಅವರು ಒಪ್ಪಿದ್ದರೂ ಅದು ದೀರ್ಘಕಾಲ ಉಳಿಯುವುದು ಕಷ್ಟ ಎಂಬ ಅನುಮಾನವನ್ನು ಬಹಳಷ್ಟು ಜನರು ವ್ಯಕ್ತಪಡಿಸಿದ್ದರು. ಅವರ ಅನುಮಾನ ಸುಳ್ಳು ಎಂದು ಸಾಬೀತು ಮಾಡುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸಿದ್ದು ಜವಹರಲಾಲ್ ನೆಹರು ಅವರು. ಇಂದು ದೇಶದಲ್ಲಿ ಏಕತೆ ಉಳಿಯಲು ನೆಹರು ಮತ್ತು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರು ತೆಗೆದುಕೊಂಡ ದೃಢ ನಿರ್ಣಗಳು ಕಾರಣ. ಇಂದು ದೇಶದಲ್ಲಿ ಆಗಿರುವ ಸಾಮಾಜಿಕ, ಆರ್ಥಿಕ ಹಾಗೂ ಕೈಗಾರಿಕಾ ಬೆಳವಣಿಗೆಗಳಿಗೆ ಅಡಿಪಾಯ ಹಾಕಿದ್ದು ನೆಹರು ಎಂದರು.
ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ, ಕಾರಣ ದೇಶಕ್ಕೆ ಸಂವಿಧಾನ ಕೊಟ್ಟಿದ್ದು, ಹೋರಾಟದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಗೆ ದೇಶವನ್ನು ಹಾಳು ಮಾಡಲು ಮಾತ್ರ ಗೊತ್ತು. ದೇಶ, ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಉಳಿಯಬೇಕು. ಪಕ್ಷವನ್ನು ಉಳಿಸಿ, ಬೆಳೆಸುವ ಕೆಲಸ ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಕರ್ತವ್ಯ. ದೇಶವಿಂದು ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ನೀರಾವರಿ ಕ್ಷೇತ್ರಗಳಲ್ಲಿ ಬೆಳೆದಿದ್ದರೆ ಅದಕ್ಕೆ ನೆಹರು ಅವರು ಹಾಕಿಕೊಟ್ಟ ಭದ್ರ ಬುನಾದಿ ಕಾರಣ. ಇಂದು ನೆಹರು ಅವರ ಜನ್ಮದಿನವನ್ನು ಆಚರಿಸುವ ನಿಜವಾದ ಉದ್ದೇಶವೆಂದರೆ ಅವರು ತೋರಿದ ಹಾದಿಯಲ್ಲಿ ಸಾಗುವುದು, ಅವರ ತ್ಯಾಗ, ಬಲಿದಾನ, ಆದರ್ಶಗಳನ್ನು ನೆನೆದು ಅವರಂತೆ ನಾವಾಗಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಇದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ