NEP ರದ್ದತಿ : ರಾಜಕೀಯ ದುರುದ್ದೇಷ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು:

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿ, ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಪಠ್ಯಪುಸ್ತಕ ಬದಲಾವಣೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ಹಿರಿಯ ಮುಖಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಡ ಬುದ್ಧಿಜೀವಿಗಳ ಕಪಿಮುಷ್ಠಿಯಲ್ಲಿದ್ದಾರೆ ಎಂದು ಮಂಗಳವಾರ ಆರೋಪಿಸಿದರು.

     ನಗರದಲ್ಲಿ ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜ್ಯುಕೇಷನ್‌ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಪರ್ಧಾತ್ಮಕ ಜಗತ್ತಿಗೆ ನಮ್ಮ ವಿದ್ಯಾರ್ಥಿಗಳು ಸಿದ್ಧರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿದ್ದರು. ಇದನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಎಸ್‌ಇಪಿ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್‌ ಮುಖಂಡರ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿಗೊಳಿಸಲಿ’ ಎಂದು ಹೇಳಿದರು.

    ‘ಬಡವರು ಹಾಗೂ ಸಾಮಾನ್ಯ ವರ್ಗದ ಮಕ್ಕಳು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗಬಾರದು ಎನ್ನುವ ಕಾರಣದಿಂದ ಕಾಂಗ್ರೆಸ್‌ ಸರ್ಕಾರ ಷಡ್ಯಂತ್ರ ರಚಿಸಿದೆ. ಸರ್ಕಾರಿ ಶಾಲೆಗಳಲ್ಲಿ ಎನ್‌ಇಪಿ ಜಾರಿಗೆ ಅವಕಾಶ ನೀಡುತ್ತಿಲ್ಲ. ಎನ್‌ಇಪಿಯಲ್ಲಿ ಯಾವ ಅಂಶ ಸರಿಯಿಲ್ಲ ಎನ್ನುವುದನ್ನು ಅವರು ಹೇಳುತ್ತಿಲ್ಲ. ಮೋದಿ ಸರ್ಕಾರ ರೂಪಿಸಿದೆ ಎನ್ನುವ ಒಂದೇ ಕಾರಣಕ್ಕಾಗಿ ಅದನ್ನು ತೆಗೆದುಹಾಕಲು ಹೊರಟಿದ್ದಾರೆ. ಹಾಗಾದರೆ, ಇವರು ಜಾರಿಗೆ ತರಲು ಹೊರಟಿರುವ ಎಸ್‌ಇಪಿ– ಸೋನಿಯಾ ಶಿಕ್ಷಣ ನೀತಿಯೇ’ ಎಂದು ಪ್ರಶ್ನಿಸಿದರು.

    ‘ನಮ್ಮಲ್ಲಿ ಕೀಳರಿಮೆ ಮೂಡಿಸುವಂತಹ, ಯಾರೋ ಬರೆದಿದ್ದ ಪಾಠಗಳನ್ನು ನಾವು ಓದಬೇಕಾಗಿಲ್ಲ. ನಮ್ಮ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮೂಡಿಸುವ ಶಿಕ್ಷಣ ಬೇಕು. ಹಿಂದಿನ ನಮ್ಮ (ಬಿಜೆಪಿ) ಸರ್ಕಾರದಲ್ಲಿ ಅಳವಡಿಸಲಾಗಿದ್ದ ಹೆಗ್ಗಡೆವಾರ್‌, ಚಕ್ರವರ್ತಿ ಸೂಲಿಬೆಲೆ, ಗಣೇಶ ಅವರ ಪಾಠಗಳನ್ನು ರಾಜ್ಯ ಸರ್ಕಾರ ತೆಗೆದುಹಾಕಿದೆ. ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಪಠ್ಯಕ್ರಮ ಪರಿಷ್ಕರಣೆ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿರುವುದು ದುರಂತ. ಇದರ ವಿರುದ್ಧ ವಿದ್ಯಾರ್ಥಿಗಳ ಆಂದೋಲನ ರೂಪಿಸುತ್ತೇವೆ’ ಎಂದು ಹೇಳಿದರು.

   ಸಿದ್ದರಾಮಯ್ಯ ಅವರು ಎಡಪಂಥೀಯ ಬುದ್ಧಿಜೀವಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಬಯಕೆಯಂತೆ ಪಠ್ಯಕ್ರಮ ಬದಲಾಯಿಸಿದ್ದಾರೆ. ಶಿಕ್ಷಣ ತಜ್ಞರ ಸಲಹೆ ಪಡೆಯದೇ, ಪಾಲಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಆಲಿಸದೆ ಪಠ್ಯಗಳನ್ನು ಬದಲಾಯಿಸಿದ್ದಾರೆ. ಈ ಮೂಲಕ ಶಿಕ್ಷಣ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ದುರಂತ’ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap