ಹುಳಿಯಾರು :
ಹುಳಿಯಾರು ಪಟ್ಟಣದ ಮಾರುಕಟ್ಟೆಯಲ್ಲಿ ಈಗ ನೇರಳೆ ಹಣ್ಣಿನ ಕಾರುಬಾರು. ಊರಿನ ಪ್ರಮುಖ ರಸ್ತೆಗಳಲ್ಲಿ ತಳ್ಳುಗಾಡಿಗಳಲ್ಲಿ ನೇರಳೆ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಮಾಡುವವ ಅನೇಕ ವ್ಯಾಪಾರಿಗಳು ಕಂಡು ಬರುತ್ತಿದ್ದು, ನೇರಳೆ ಹಣ್ಣಿನ ಪ್ರಿಯರ ಗಮನ ಸೆಳೆಯುತ್ತಿದೆ.
ತಾಜ ಮತ್ತು ರುಚಿಕರ :
ಸೀಬೆ, ದ್ರಾಕ್ಷಿ, ಮಾವು ಸೇರಿದಂತೆ ಸೀಜನ್ ಹಣ್ಣುಗಳನ್ನು ಮಾರುವವರೇ ಈಗ ನೇರಳೆ ಹಣ್ಣಿಗೆ ಶಿಫ್ಟ್ ಆಗಿದ್ದು ಸ್ಥಳಿಯ ರೈತರ ಮರ ಹಾಗೂ ಸುತ್ತಮುತ್ತಲ ಅರಣ್ಯಗಳಿಂದ ಮಾರಾಟಗಾರರೇ ಕಿತ್ತು ತಂದು ಮಾರುತ್ತಿದ್ದಾರೆ. ಹಾಗಾಗಿ ಹುಳಿಯಾರಿನಲ್ಲಿ ಮಾರಾಟವಾಗುತ್ತಿರುವ ನೇರಳೆ ತಾಜ ಮತ್ತು ರುಚಿಯಾಗಿದ್ದು ಬೆಲೆ ಹೆಚ್ಚಾದರೂ ನೇರಳೆ ಹಣ್ಣು ಖರೀದಿಗೆ ಗ್ರಾಹಕರು ಮುಂದಾಗುತ್ತಿದ್ದು ಮಾರಾಟ ಜೋರಾಗಿದೆ.
ಮಾರಾಟವಾಗುವಷ್ಟು ಕೋಯ್ಲು :
ಆರಂಭದಲ್ಲಿ ಕೆಜಿಗೆ 200 ರೂ. ವರೆಗೂ ಇದ್ದ ಬೆಲೆ ಈಗ 100 ರೂ. ನಿಂದ 120 ರೂ.ಗೆ ಮಾರಾಟವಾಗುತ್ತಿದೆ. ಆರೋಗ್ಯಕ್ಕೂ ಒಳ್ಳೆಯದಾದ ನೇರಳೆ ಹಣ್ಣು ಎಲ್ಲ ಕಾಲದಲ್ಲೂ ಸಿಗುವುದಿಲ್ಲ. ವರ್ಷಕ್ಕೆ 1 ತಿಂಗಳು ಮಾತ್ರ ಸಿಗುವುದರಿಂದ ಬೇಡಿಕೆ ಹೆಚ್ಚಿದೆ. ಕೊಯ್ದಿಟ್ಟ ನೇರಳೆ ಹಣ್ಣು ಹೆಚ್ಚು ಎಂದರೆ ಎರಡು ದಿನ ಬಾಳಿಕೆ ಬರುತ್ತದೆ. ಆಮೇಲೆ ಹಾಳಾಗಲು ಆರಂಭವಾಗುತ್ತದೆ. ಹಾಗಾಗಿ ದಿನಕ್ಕೆ ಎಷ್ಟು ಮಾರಾಟವಾಗುತ್ತದೆಯೊ ಅಷ್ಟನ್ನು ಮಾತ್ರ ವ್ಯಾಪಾರಕ್ಕೆ ತರುತ್ತಿದ್ದಾರೆ. ಆದಾಗ್ಯೂ ಸಂಜೆ ಹೊತ್ತಿಗೆ ಮಾರಾಟವಾಗದೆ ಉಳಿದರೆ ಕಡಿಮೆ ದರಕ್ಕೆ ಕೊಡುವವರೂ ಇದ್ದಾರೆ.
ಕೈ ಹಿಡಿದ ನೇರಳೆ :
ಕೊರೊನಾ ಸೋಂಕಿನಿಂದ ಈ ವರ್ಷ ಮಾವು ಹಾಗೂ ಹಲಸು ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಸೀಝನ್ ಹಣ್ಣಿನ ವ್ಯಾಪಾರಿಗಳಿಗೆ ನೇರಳೆ ಹಣ್ಣು ಬುದುಕು ರೂಪಿಸಿದಂತಾಗಿದೆ. ಪಟ್ಟಣದಲ್ಲಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಗಳು ತೋಟ ಮತ್ತು ಅರಣ್ಯಕ್ಕೆ ಹೋಗಿ ಹಣ್ಣು ತಂದು, ಪಟ್ಟಣ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ನೇರಳೆ ಹಣ್ಣಿನ ಮಾರಾಟದಿಂದ ಬಡ ಕುಟುಂಬಗಳು ಬದುಕು ರೂಪಿಸಿಕೊಳ್ಳುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
