ನವದೆಹಲಿ
ತನ್ನ ಕೈಕೆಳಗೆ ಕೆಲಸ ಮಾಡುವ ಮತ್ತು ತನಗೆ ನೇರವಾಗಿ ರಿಪೋರ್ಟ್ ಮಾಡುವ ಸಹೋದ್ಯೊಗಿ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ ನೆಸ್ಲೆ ಸಿಇಒ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾಗೊಳಿಸಲಾಗಿದೆ. ಸಹೋದ್ಯೋಗಿ ಜೊತೆಗಿನ ಸಂಬಂಧವನ್ನು ಮುಚ್ಚಿಟ್ಟ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ನೆಸ್ಸೆ ಕಂಪನಿಯಲ್ಲೇ ಹಿರಿಯ ಎಕ್ಸಿಕ್ಯೂಟಿವ್ ಆಗಿರುವ ಫಿಲಿಪ್ ನವ್ರಾಟಿಲ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
ಸ್ವಿಟ್ಜರ್ಲ್ಯಾಂಡ್ ಮೂಲದ ನೆಸ್ಲೆ ಕಂಪನಿಯಲ್ಲೇ ಸಹೋದ್ಯೋಗಿ ಜೊತೆ ಲಾರೆಂಟ್ ಫ್ರೀಕ್ಸೆ ಅವರಿಗೆ ರೋಮ್ಯಾಂಟಿಕ್ ರಿಲೇಶನ್ಶಿಪ್ ಇರುವುದಾಗಿ ರಹಸ್ಯವಾಗಿ ದೂರೊಂದು ದಾಖಲಾಗಿತ್ತು. ಕಂಪನಿಯ ಛೇರ್ಮನ್ ಪೌಲ್ ಬುಲ್ಕೆ (Paul Bulcke) ಮತ್ತು ಸ್ವತಂತ್ರ ನಿರ್ದೇಶಕ ಪಾಬ್ಲೊ ಇಸ್ಲಾ ಅವರ ಕಣ್ಗಾವಲಿನಲ್ಲಿ ಆಂತರಿಕ ಮತ್ತು ಬಾಹ್ಯ ತನಿಖೆ ನಡೆಸಲಾಯಿತು. ಅದರಲ್ಲಿ ಲಾರೆಂಟ್ ಅವರು ಸಹೋದ್ಯೋಗಿ ಜೊತೆ ಸಂಬಂಧ ಹೊಂದಿರುವುದು ಜಾಹೀರಾಗಿದೆ. ನಂತರ ಅವರನ್ನು ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ಸಿಇಒ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಲಾರೆಂಟ್ ಅವರು ನೆಸ್ಲೆಯಲ್ಲಿ ನಾಲ್ಕು ದಶಕಗಳಿಂದ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಸಿಇಒ ಆಗಿದ್ದ ಮಾರ್ಕ್ ಶ್ನೀಡರ್ ಅವರನ್ನು ಮ್ಯಾನೇಜ್ಮೆಂಟ್ ಕಿತ್ತುಹಾಕಿತ್ತು. ಅವರ ಜಾಗಕ್ಕೆ ಲಾರೆಂಟ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಯಿತು. ಒಂದು ವರ್ಷದ ಅಂತರದಲ್ಲಿ ಲಾರೆಂಟ್ ಕೂಡ ನಿರ್ಗಮಿಸುತ್ತಿದ್ದಾರೆ. ಸಿಇಒ ಸ್ಥಾನ ಮಾತ್ರವಲ್ಲ, ನೌಕರಿಯಿಂದಲೇ ಅವರನ್ನು ತೆಗೆಯಲಾಗಿದೆ. ಇಷ್ಟು ಮಾತ್ರವಲ್ಲ, ಅವರಿಗೆ ಎಕ್ಸಿಟ್ ಪ್ಯಾಕೇಜ್ ಕೂಡ ನೀಡದೇ ಕಳುಹಿಸಲಾಗಿದೆ.
‘ಇದು ಅಗತ್ಯವಾಗಿರುವ ನಿರ್ಧಾರ. ನೆಸ್ಲೆಯ ಬಲ ಇರುವುದೇ ಅದರ ಮೌಲ್ಯಗಳಲ್ಲಿ. ಇಷ್ಟು ವರ್ಷ ಕಂಪನಿಗೆ ಸೇವೆ ಸಲ್ಲಿಸಿದ ಲಾರೆಂಟ್ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ’ ಎಂದು ಛೇರ್ಮನ್ ಪೌಲ್ ಬಲ್ಕೆ ತಿಳಿಸಿದ್ದಾರೆ. ನೆಸ್ಲೆ ಛೇರ್ಮನ್ ಅವರು ಮುಂದಿನ ವರ್ಷದವರೆಗೂ ಕಂಪನಿಯ ಸೇವೆಯಲ್ಲಿ ಮುಂದುವರಿಯುತ್ತಾರೆ.
ಎರಡು ತಿಂಗಳ ಹಿಂದೆ ಆಸ್ಟ್ರಾನಾಮರ್ ಎನ್ನುವ ಕಂಪನಿಯ ಸಿಇಒ ಆಂಡಿ ಬೈರೋನ್ ತಮ್ಮ ಸಹೋದ್ಯೋಗಿಯೊಬ್ಬರೊಂದಿಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ದೃಶ್ಯ ವಿಶ್ವದೆಲ್ಲೆಡೆ ವೈರಲ್ ಆಗಿತ್ತು. ಕೋಲ್ಡ್ಪ್ಲೇ ಮ್ಯೂಸಿಕ್ ಶೋನಲ್ಲಿ ಕ್ಯಾಮೆರಾ ಕಣ್ಣಿಗೆ ಇವರಿಬ್ಬರು ಸಿಕ್ಕಿಬಿದ್ದಿದ್ದರು. ಅದಾದ ಬಳಿಕ ಆಂಡಿ ಅವರು ರಾಜೀನಾಮೆ ನೀಡಬೇಕಾಯಿತು.
