ಮುಂಬೈ:
ಬಾಲಿವುಡ್ ನ ಬ್ಯಾಡ್ ಬಾಯ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಇತ್ತೀಚೆಗೆ ಬಾರಿ ಭದ್ರತೆಯೊಂದಿಗೆ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಭದ್ರತೆಗಾಗಿಯೇ ಕೋಟಿ ಕೋಟಿ ರೂ. ಖರ್ಚು ಮಾಡುತ್ತಿರುವ ಭಾಯ್ ಜಾನ್ ಇದೀಗ ಹೊಸ ಕಾರೊಂದನ್ನು ಖರೀದಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸುರಕ್ಷತೆಗಾಗಿಯೇ ಹೇಳಿ ಮಾಡಿಸಿದ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಯುಎಸ್‌ವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ದುಬೈ ಯಿಂದ ತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಕಾರಿನ ಬೆಲೆ ಸುಮಾರು 2 ಕೋಟಿ ರೂ. ಆಗಿದ್ದು, ತ್ವರಿತವಾಗಿ ತರಿಸಿಕೊಳ್ಳಲು ಇನ್ನಷ್ಟು ವೆಚ್ಚ ತಗುಲತ್ತದೆ ಎಂದು ಹೇಳಲಾಗುತ್ತದೆ.
ಬುಲೆಟ್ ಪ್ರೂಫ್ ಕಾರು ವಿಶೇಷ ಸುಧಾರಿತ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಸ್ಫೋಟಕ ಎಚ್ಚರಿಕೆ ಸೇರಿಂದಂತೆ ಎಲ್ಲ ರೀತಿಯ ಶಸ್ತ್ರಗಳನ್ನು ತಡೆಯುವ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಗೌಪ್ಯತೆಯನ್ನು ಹೆಚ್ಚಿಸಲು ಸೇಫ್ ವಿಂಡೋಗಳನ್ನು ಕೂಡ ಅಳವಡಿಸಲಾಗಿದೆ. ಗಲ್ಫ್ ರಾಷ್ಟ್ರಗಳು ಹಾಗೂ ಆಗ್ನೇಯ ಏಷ್ಯಾದ ದೇಶಗಳಲ್ಲಿ ಭದ್ರತೆಗಾಗಿ ನಿಸ್ಸಾನ್ ಯುಎಸ್‌ವಿ ಕಾರನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಅಕ್ಟೋಬರ್ 12ರಂದು ಮಹಾರಾಷ್ಟ್ರದ ಎನ್.ಸಿ.ಪಿ. ಶಾಸಕ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದಾದ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್‌ಗೂ ಕೊಲೆ ಬೆದರಿಕೆ ಹಾಕಿದೆ. ಕ್ಷಮೆ ಕೇಳುವುದರ ಜತೆಗೆ 5 ಕೋಟಿ ರೂ. ನೀಡಬೇಕು, ಇಲ್ಲವಾದರೆ ಬಾಬಾ ಸಿದ್ಧಿಕಿಗಿಂತ ಹೀನಾಯವಾಗಿ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ. ಇದಾದ ಬಳಿಕ ಮುಂಬೈ ಪೋಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿ, ಬೆಂಗಾವಲು ಪಡೆಯನ್ನೂ ಕೂಡಾ ನೇಮಿಸಲಾಗಿದೆ. ಸಲ್ಮಾನ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನ್ಪಾಸದ ಚಟುವಟಿಕೆಗಳನ್ನು ನಿಯಂತ್ರಿಸಲು ಕಮಾಂಡೋ ಸೆಂಟರ್ ಕೂಡಾ ತೆರೆಯಲಾಗಿದೆ.
ಬಿಷ್ಣೋಯ್ ಸಮಾಜದ ಪವಿತ್ರವೆಂದು ಪರಿಗಣಿಸಲಾದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾದಾಗಿನಿಂದಲೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಮೇಲೆ ದ್ವೇಷ ಸಾಧಿಸುತ್ತಾ ಬಂದಿದೆ. ಈ ಹಿಂದೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು. ಇದೀಗ ಮತ್ತೆ ಬೆದರಿಕೆ ಕರೆ ಬಂದಿದೆ.
ಬಾಬಾ ಸಿದ್ಧಕಿ ಹತ್ಯೆ ಬಳಿಕ ಸಲ್ಮಾನ್ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ 18ರ ಆವೃತ್ತಿಯ ಶೂಟಿಂಗ್‌ಗೆ ಕೂಡ ಬಿಗಿ ಭದ್ರತೆಯಲ್ಲಿ ಸಲ್ಮಾನ್ ಖಾನ್ 60 ಬಾಡಿಗಾರ್ಡ್‌ಗಳ ಜತೆ ಬಂದಿದ್ದರು. ಸಂಪೂರ್ಣ ಸುರಕ್ಷತೆಯಲ್ಲಿ ಶೂಟಿಂಗ್ ನಡೆಸಿದ್ದಾರೆ. ಶೂಟಿಂಗ್ ನಡೆಯುವ ಒಂದು ದಿನ ಮೊದಲೇ ಸ್ಥಳ ಪರೀಕ್ಷೆ ಮಾಡಲಾಗಿತ್ತು ಹಾಗೂ ಶೂಟಿಂಗ್ ಸೆಟ್ ಒಳಗಡೆ ಬರುವರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಬಾಬಾ ಸಿದ್ಧಿಕಿ ಜತೆಗೆ ಸಲ್ಮಾನ್ ಖಾನ್ ಆತ್ಮೀಯ ಸಂಬಂಧ ಹೊಂದಿದ್ದರು.