ನಂದಿನಿ ಇಂದ ಹೊಸ ಉತ್ಪನ್ನ ಮಾರುಕಟ್ಟೆಗೆ…..!

ಬೆಂಗಳೂರು:

     ‘ನಂದಿನಿ’ ಬ್ರ್ಯಾಂಡ್‌ನ  ಗುಣಮಟ್ಟದ ಆದ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ನಂದಿನಿ ʼದೋಸೆ ಹಿಟ್ಟುʼ  ಉತ್ಪಾದನೆ ಮಾಡದೆ ಇರಲು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳ  ನಿರ್ಧರಿಸಿದೆ.

   ನಂದಿನಿ’ ಬ್ರ್ಯಾಂಡ್‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆಗಾಗಿ ಕೆಎಂಎಫ್‌, ನಂದಿನಿ ಹೆಸರಿನಲ್ಲಿ ಮಾರುಕಟ್ಟೆಗೆ ದೋಸೆ ಹಿಟ್ಟು ಪರಿಚಯಿಸಲು ಮುಂದಾಗಿತ್ತು. ಬೆಂಗಳೂರು ಮಹಾನಗರದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶಕ್ಕೆ ಕೆಎಂಎಫ್‌ ಆಡಳಿತ ಮಂಡಳಿಯು ದೋಸೆ ಹಿಟ್ಟಿನ ಮಾರಾಟದ ನಿರ್ಧಾರದಿಂದ ಹಿಂದೆ ಸರಿದಿದೆ.

      “ದೋಸೆ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಂದಿನಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ಬರುತ್ತದೆ. ಇದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕವಿದೆ. ಈ ಕಾರಣಕ್ಕೆ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ” ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ತಿಳಿಸಿದ್ದಾರೆ.

      ಈ ಮಧ್ಯೆ, ಕೆಎಂಎಫ್‌ ನವೆಂಬರ್‌ 21ರಂದು ಹೊಸದಿಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಆರಂಭಿಸಿದೆ. ಸದ್ಯ ಗುಜರಾತ್‌ ಹಾಗೂ ಅಕ್ಕಪಕ್ಕದ ರಾಜ್ಯಗಳ ಹಾಲು ಒಕ್ಕೂಟಗಳು ರಾಜಧಾನಿಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ದೇಶದ ಸಹಕಾರಿ ಹೈನು ಉದ್ಯಮದಲ್ಲಿ ಗುಜರಾತ್‌ನ ಅಮುಲ್‌ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ನಂದಿನಿ ಇದೆ. ಈಗಾಗಲೇ ನಂದಿನಿ ವಿದೇಶಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೂ ತನ್ನ ವಹಿವಾಟು ವಿಸ್ತರಿಸಿದೆ.

     ರಾಜ್ಯದಲ್ಲಿ ದೈನಂದಿನ ಹಾಲಿನ ಸಂಗ್ರಹಣೆ ಪ್ರಮಾಣ ಕೋಟಿ ಲೀಟರ್‌ನ ಗಡಿ ದಾಟಿದ್ದು, ನಿರೀಕ್ಷೆಗೂ ಮೀರಿ ಹಾಲು ಸಂಗ್ರಹಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್‌, ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಹೊಸದಿಲ್ಲಿಯಲ್ಲೂ ಹಾಲಿನ ವಹಿವಾಟು ಆರಂಭಿಸಿತ್ತು. ಮಂಡ್ಯ ಒಕ್ಕೂಟದಿಂದ ಹೊಸದಿಲ್ಲಿ, ಹರಿಯಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಆರಂಭಿಕ ಹಂತದಲ್ಲಿ ಟ್ಯಾಂಕರ್‌ಗಳ ಮೂಲಕ 2.50 ಲಕ್ಷ ಲೀ. ಹಾಲು ಕಳುಹಿಸಲಾಗುತ್ತಿದೆ. ಹೊಸದಿಲ್ಲಿ ಹೊರವಲಯದಲ್ಲಿ ನಂದಿನಿ ಹಾಲನ್ನು ಪ್ಯಾಕ್‌ ಮಾಡಿ ಸ್ಥಳೀಯ ಡೀಲರ್‌ಗಳ ಮೂಲಕ ಮಾರಾಟ ಮಾಡಿಸಲಾಗುತ್ತಿದೆ.

Recent Articles

spot_img

Related Stories

Share via
Copy link