ಬೆಂಗಳೂರು:
ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಹೊಸ ವರ್ಷಾಚರಣೆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಜನಸಂದಣಿ ಇರುವ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಸ್ಟಾರ್ ಹೋಟೆಲ್, ಪಬ್ , ಕ್ಲಬ್ಗಳ ಏರಿಯಾದಲ್ಲೊ ಬಂದೋಬಸ್ತ್ ಪಾಯಿಂಟ್ಗಳ ನಿಯೋಜನೆ ಮಾಡಲಾಗಿದೆ.
ಬಿಬಿಎಂಪಿ, ಮೆಟ್ರೋ, ಬಿಎಂಟಿಸಿ, ಅಬಕಾರಿ, ಆರೋಗ್ಯ ಇಲಾಖೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಎಂಆರ್ಸಿಎಲ್, ಬೆಸ್ಕಾಂ ಜೊತೆಗೆ ಮಾತುಕತೆ ನಡೆಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ, ಫಿನಿಕ್ಸ್ ಮಾಲ್, ಕ್ಲಬ್ಗಳ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತದೆ, ಮಹಿಳೆಯರ ಸುರಕ್ಷತೆಗಾಗಿ ಸೇಫ್ ಟೀಂ ಐಲ್ಯಾಂಡ್ಗಳ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಮಕ್ಕಳು ಕಾಣೆಯಾದರೆ ಕಳುವು ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಿಯೋಸ್ಕ್ಗಳು ಇರಲಿವೆ. ಸೂಕ್ತ ಕಣ್ಗಾವಲು ಪ್ರದೇಶದಲ್ಲಿ ವಾಚ್ ಟವರ್ ಗಳ ನಿರ್ಮಾಣ, ಬೈನಾಕುಲರ್ ಮೂಲಕ ವೀಕ್ಷಣೆ ಮಾಡಲಾಗುತ್ತದೆ. ಉಳಿದಂತೆ ಇಂದಿರಾನಗರ ಹಾಗೂ ಕೋರಮಂಗಲದಲ್ಲೂ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಡ್ರಗ್ಸ್ ಸೇವನೆ ಮಾಡೋಕೆ ಬಿಡಲ್ಲ. ಈಗಾಗಲೇ ಪೆಡ್ಲರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಅನಧಿಕೃತವಾಗಿ ಮದ್ಯ ಶೇಖರಣೆ ಮಾಡುವುದುದು, ಬ್ಲಾಕ್ ನಲ್ಲಿ ಮಾರಾಟ ಮಾಡುವವರ ಮೇಲೆಯೂ ನಿಗಾ ಇರಿಸಲಾಗಿದೆ. ಪ್ರಮುಖ ಸ್ಥಳದಲ್ಲಿ ಡ್ರೋಣ್ ಕ್ಯಾಮೆರಾಗಳ ಬಳಕೆ ಮಾಡಲಾಗುತ್ತಿದೆ. ನಗರಾದ್ಯಂತ 10 ಸಾವಿರಕ್ಕೂ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಹೋಂ ಗಾರ್ಡ್ಗಳನ್ನು ಸಹ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.
ನಗರದ ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿ, 160 ಇನ್ಸ್ಪೆಕ್ಟರ್, 600 ಸಬ್ ಇನ್ಸ್ಪೆಕ್ಟರ್, 600 ಎಎಸ್ಐ, 1,800 ಹೆಡ್ ಕಾನ್ಸ್ಟೇಬಲ್ ಮತ್ತು 5,200 ಪೊಲೀಸ್ ಕಾನ್ಸ್ಟೇಬಲ್ ನಿಯೋಜಿಸಲಾಗಿದೆ.
ಡಿ.31 ರಾತ್ರಿ 11 ಗಂಟೆಯಿಂದ ಎಲ್ಲಾ ಫ್ಲೈಓವರ್ ಗಳು ಬಂದ್ ಆಗಲಿದೆ. ರಾತ್ರಿ ಒಂದು ಗಂಟೆವರೆಗೂ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ. ಒಂದು ಗಂಟೆಗೆ ಹೋಟೆಲ್, ಬಾರ್ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಬೇಕು. ಮಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಗಳಿರುವುದರಿಂದ ಅಲ್ಲಿಯೂ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
48 ನಾಕಾಬಂದಿಗಳನ್ನ ಮಾಡಲಾಗಿದೆ. ವೀಲಿಂಗ್ ಹಾಗೂ ಡ್ರ್ಯಾಗ್ ರೇಸಿಂಗ್’ಗೆ ಕಡಿವಾಣ ಹಾಕಲು ಸಿದ್ಧತೆ ಮಾಡಲಾಗಿದೆ. 48 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದರು.