ಹೊಸದಿಲ್ಲಿ:
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನ್ಯೂಸ್18 ನಡೆಸಿರುವ ಸಮೀಕ್ಷೆಯ ಪ್ರಕಾರ, ಕರ್ನಾಟಕದ 28 ಕ್ಷೇತ್ರಗಳಲ್ಲಿ ಎನ್‌ಡಿಎ (ಬಿಜೆಪಿ ಮತ್ತು ಜೆಡಿಎಸ್) 25 ಕ್ಷೇತ್ರಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ 3 ಸ್ಥಾನಕ್ಕೆ ತೃಪ್ತಿ ಪಡಲಿದೆ. ಹಾಗೆಯೇ, ಎನ್‌ಡಿಎ ಶೇ.58 ಮತ್ತು ಕಾಂಗ್ರೆಸ್ ಶೇ.35 ಮತ ಗಳಿಸಲಿವೆ.
ಇನ್ನು ದೇಶಾದ್ಯಂತ ಎನ್‌ಡಿಎ 411, ಇಂಡಿಯಾ ಒಕ್ಕೂಟ 105 ಮತ್ತು ಇತರರು 27 ಸ್ಥಾನಗಳನ್ನು ಜಯಿಸಲಿದ್ದಾರೆ.
ಈ ಸಮೀಕ್ಷೆಯ ಪ್ರಕಾರ, 400 ಸೀಟು ಗೆಲ್ಲುವ ತನ್ನ ಗುರಿಯನ್ನು ಎನ್‌ಡಿಎ ತಲುಪಲಿದೆ. ಇನ್ನು ಪಕ್ಷವಾರು ನೋಡುವುದಾದರೆ, ಬಿಜೆಪಿ 350 ಮತ್ತು ಮೈತ್ರಿ ಪಕ್ಷಗಳು 61 ಸ್ಥಾನ ಗೆದ್ದರೆ, ಕಾಂಗ್ರೆಸ್ 49 ಮತ್ತು ಅದರ ಮೈತ್ರಿ ಪಕ್ಷಗಳು 56 ಕ್ಷೇತ್ರಗಳನ್ನು ಗೆಲ್ಲಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಕರ್ನಾಟಕದ ಸಮೀಕ್ಷೆ:
ಇನ್ನು ವಲಯವಾರು ನೋಡುವುದಾದರೆ, ಬೆಂಗಳೂರು ಭಾಗದ 5 ಲೋಕಸಭಾ ಕ್ಷೇತ್ರಗಳ ಪೈಕಿ 1ರಲ್ಲಿ ಕಾಂಗ್ರೆಸ್ ಮತ್ತು 4ರಲ್ಲಿ ಎನ್‌ಡಿಎ ಗೆಲ್ಲಲಿದೆ. ಉತ್ತರ ಕರ್ನಾಟಕದ 11 ಕ್ಷೇತ್ರಗಳಲ್ಲಿ 1ರಲ್ಲಿ ಕಾಂಗ್ರೆಸ್ ಮತ್ತು 10ರಲ್ಲಿ ಎನ್‌ಡಿಎ ಜಯ ಗಳಿಸಿದರೆ, ಕರಾವಳಿ ಭಾಗದ ಮೂರೂ ಕ್ಷೇತ್ರಗಳು ಎನ್‌ಡಿಎ ಪಾಲಾಗಲಿವೆ. ಹಾಗೆಯೇ, ದಕ್ಷಿಣ ಕರ್ನಾಟಕದ 9 ಲೋಕಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ ಎಂದು ಸಮೀಕ್ಷೆ ಹೇಳಿದೆ.
ಕರ್ನಾಟಕದ ಮಟ್ಟಿಗೆ ಬಿಜೆಪಿ ಮೈತ್ರಿಯ ಪಕ್ಷವಾದ ಜೆಡಿಎಸ್ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬುದು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಈ ಸಮೀಕ್ಷೆಯ ಫಲಿತಾಂಶವು ಬಿಜೆಪಿಗೆ ಕಳೆದ ಬಾರಿಗಿಂತಲೂ ಒಂದರೆಡು ಸ್ಥಾನಗಳು ಕಡಿಮೆಯಾಗಲಿವೆ. ಆದರೆ ಬಿಜೆಪಿ-ಜೆಡಿಎಸ್ ಎರಡೂ ಸೇರಿ ಕಳೆದ ಬಾರಿಯ ಫಲಿತಾಂಶವನ್ನು ಮರುಕಳಿಸಲಿವೆ.
ಇನ್ನು ಕಾಂಗ್ರೆಸ್ ಕಳೆದ ಬಾರಿ ಒಂದು ಸ್ಥಾನ ಗೆದ್ದಿತ್ತು. ಅದೀಗ ಹೆಚ್ಚುವರಿ 2 ಸ್ಥಾನಗಳನ್ನು ಪಡೆದುಕೊಳ್ಳಬಹುದು. ವಿಧಾನಸಭೆಯಲ್ಲಿ ಗ್ಯಾರಂಟಿಗಳ ಮೂಲಕ ಭರ್ಜರಿ ಜಯ ಸಾಧಿಸಿದ್ದ ಕಾಂಗ್ರೆಸ್‌ಗೆ ಅದೇ ಫಲಿತಾಂಶವನ್ನು ಪುನರಾವರ್ತಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಈ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯವಾಗಿದೆ.
ಉತ್ತರದಲ್ಲಿ ಬಹುತೇಕ ಕಡೆ ಕ್ಲೀನ್ ಸ್ವೀಪ್: ಉತ್ತರ ಭಾರತದ ರಾಜಸ್ಥಾನ, ಗುಜರಾತ್, ಉತ್ತರಾಖಂಡ, ದಿಲ್ಲಿ, ಛತ್ತೀಸ್‌ಗಢ, ಮಧ್ಯ ಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಪ್ರದರ್ಶನ ತೋರಲಿದೆ. ಪಶ್ಚಿಮ ಬಂಗಾಲ, ತೆಲಂಗಾಣದಲ್ಲೂ ಎನ್‌ಡಿಎ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಭಾರೀ ನಿರಾಸೆ ಎದುರಾಗಲಿದೆ ಎಂದು ನ್ಯೂಸ್19 ಸಮೀಕ್ಷೆ ಭವಿಷ್ಯ ನುಡಿದಿದೆ.
ಕರ್ನಾಟಕದ ವಲಯವಾರು ಸಮೀಕ್ಷೆ
ವಲಯ ಎನ್‌ಡಿಎ ಕಾಂಗ್ರೆಸ್
ಬೆಂಗಳೂರು ಭಾಗ 4 1
ಉ.ಕರ್ನಾಟಕ 10 1
ಕರಾವಳಿ ಭಾಗ 3 0
ದ.ಕರ್ನಾಟಕ 8 1