ನವದೆಹಲಿ :
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಭಾರತ ಪ್ರವಾಸದ ವೇಳೆ ದೆಹಲಿಯ ಬೀದಿಯೊಂದರಲ್ಲಿ ಮಕ್ಕಳೊಂದಿಗೆ ಆಟವಾಡುವ ಮೂಲಕ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಕೆಲವು ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಾ ತಮ್ಮ ಸಮಯವನ್ನು ಆನಂದಿಸಿದರು. ಈ ವೇಳೆ ನ್ಯೂಜಿಲ್ಯಾಂಡ್‌ನ ಮಾಜಿ ಆಟಗಾರ ರಾಸ್ ಟೇಲರ್, ಅಜಾಜ್ ಪಟೇಲ್ ಮತ್ತು ಭಾರತ ತಂಡದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ ಉಪಸ್ಥಿತರಿದ್ದರು.
ಪ್ರಧಾನಿ ಕ್ರಿಸ್ಟೋಫರ್ ಅವರು ಮಕ್ಕಳೊಂದಿಗೆ ಮತ್ತು ಕಪಿಲ್ ಜತೆ ಸೇರಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಡೆಸಿದ ವಿಡಿಯೊವನ್ನು ಪಿಎಂ ಲಕ್ಸನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊದಲ್ಲಿ ಕ್ರಿಸ್ಟೋಫರ್ ಅವರ ಆಲ್‌ರೌಂಡರ್ ಪ್ರದರ್ಶನವನ್ನು ಕಾಣಬಹುದು. ಎರಡು ಅದ್ಭುತ ಕ್ಯಾಚ್‌ಗಳನ್ನು ಕೂಡ ಹಿಡಿದು ಗಮನಸೆಳೆದರು.
“ಕಿವೀಸ್‌ಗಾಗಿ ಅತ್ಯುತ್ತಮ ಪ್ರದರ್ಶನ ನೀಡಲು ಭಾರತದಲ್ಲಿ ಶ್ರಮಿಸುತ್ತಿದ್ದೇನೆ” ಎಂದು ಪಿಎಂ ಲಕ್ಸನ್ ಅಜಾಜ್ ಪಟೇಲ್ ಅವರೊಂದಿಗೆ ಜಂಟಿ ಪೋಸ್ಟ್‌ನಲ್ಲಿ ಹೇಳಿದರು. ಕಪೊಲ್ ದೇವ್ ಜತೆ ಕೂಡ ಕೆಲ ಕಾಲ ಕ್ರಿಕೆಟ್ ಬಗೆಗಿನ ಚರ್ಚೆಗಳನ್ನು ನಡೆಸಿದರು. ಸ್ಟೋಫರ್ ಲಕ್ಸನ್ ಅವರು ಐದು ದಿನಗಳ ಭೇಟಿಗಾಗಿ ಭಾರತಕ್ಕೆ ಭಾನುವಾರ ಬಂದಿದ್ದರು. ಸೋಮವಾರ ಕ್ರಿಸ್ಟೋಫರ್ ಅವರನ್ನು ಭೇಟಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು ಈ ವೇಳೆ ರಕ್ಷಣೆ ಹಾಗೂ ಹಿಂದೂ ಮಹಾಸಾಗರ–ಪೆಸಿಫಿಕ್ ಸುರಕ್ಷತೆ ವಿಚಾರದಲ್ಲಿ ಹೆಚ್ಚಿನ ಸಹಭಾಗಿತ್ವ ಸೇರಿ ಹಲವು ವಿಷಯಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಆರು ಒಪ್ಪಂದಗಳು ಏರ್ಪಟ್ಟವು. ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಖಾಲಿಸ್ತಾನಿ ಪರ ಚಟುವಟಿಕೆಗಳ ಬಗ್ಗೆಯೂ ಭಾರತ ಕಳವಳ ವ್ಯಕ್ತಪಡಿಸಿತ್ತು.
ಮಾರ್ಚ್ 9 ರಂದು ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನೇ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
