ಬೆಂಗಳೂರು:
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಷ್ಟ್ರೀಯ ಹೆದ್ದಾರಿ 48 ರಸ್ತೆಯನ್ನು ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇಯನ್ನಾಗಿ ಮಾಡಲು ಮುಂದಾಗಿದೆ, ಹೀಗಾಗಿ ಶೀಘ್ರದಲ್ಲೇ ಪ್ರಯಾಣಿಕರು ನೆಲಮಂಗಲದಿಂದ ತುಮಕೂರು ಮತ್ತು ಚಿತ್ರದುರ್ಗಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ.
ಡಿಸೆಂಬರ್ 2025 ರ ವೇಳೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ರೀತಿಯಲ್ಲಿಯೇ ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶ ನಿಯಂತ್ರಿತಗೊಳಿಸಲು NHAI ನಿರ್ಧರಿಸಿದೆ. ತುಮಕೂರು ರಸ್ತೆಯಲ್ಲಿರುವ ಎರಡು ಟೋಲ್ ಪ್ಲಾಜಾಗಳನ್ನು ಮುಚ್ಚಿ ಹೊಸ ಟೋಲ್ ಪ್ಲಾಜಾ ತೆರೆಯಲಿದೆ. NHAI ನೆಲಮಂಗಲ ಟೋಲ್ ಪ್ಲಾಜಾವನ್ನು ವಿಸ್ತರಿಸುತ್ತಿದೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಪೂರೈಸಲು ಅಸ್ತಿತ್ವದಲ್ಲಿರುವ ಆರು ಲೇನ್ಗಳಿಂದ ಹತ್ತು ಲೇನ್ಗಳಾಗಿ ಬದಲಾಯಿಸಲಿದ್ದು ಬ್ಯಾರಿಕೇಡ್ ಅಳವಡಿಸಲಿದೆ.
ತುಮಕೂರು ರಸ್ತೆಯಲ್ಲಿರುವ ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ಪ್ಲಾಜಾಗಳನ್ನು ಮುಚ್ಚುತ್ತೇವೆ ಮತ್ತು NH-48 ರ ರಾಯಲಪಾಳ್ಯದಲ್ಲಿ ಹೊಸ ಟೋಲ್ ಪ್ಲಾಜಾ ಸ್ಥಾಪಿಸುತ್ತೇವೆ. ಅಸ್ತಿತ್ವದಲ್ಲಿರುವ ಎರಡು ಟೋಲ್ ಗಳು ಪರಸ್ಪರ ಹತ್ತಿರದಲ್ಲಿವೆ. ಹೊಸ ಟೋಲ್ ಪ್ಲಾಜಾ ಸ್ಥಾಪಿಸಲು ಮತ್ತು ಈಗಿರುವ ರಸ್ತೆಯನ್ನು ಆರು ಲೇನ್ಗಳಿಗೆ ವಿಸ್ತರಿಸುವ ಕೆಲಸ ನಡೆಯುತ್ತಿದೆ. ಕೆಲಸವನ್ನು ಪೂರ್ಣಗೊಳಿಸಲು ಆಗಸ್ಟ್ 2025ರ ವರೆಗೆ ಗಡುವು ನೀಡಲಾಗಿತ್ತು, ಆದರೆ ಭೂಸ್ವಾಧೀನ ಸಮಸ್ಯೆಗಳಿಂದಾಗಿ ಕಾಮಗಾರಿ ನಿಧಾನಗೊಂಡಿದೆ. ಇದು ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳಲಿದೆ ಎಂದು NHAI ನ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಕೆಡವಲಾಗುತ್ತಿರುವ ಎರಡು ಟೋಲ್ ಪ್ಲಾಜಾಗಳನ್ನು 2004 ರಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರು ಕುಲುಮೇಪಾಳ್ಯ ಟೋಲ್ ಪ್ಲಾಜಾದಲ್ಲಿ 25 ರೂ., ಚೊಕ್ಕೇನಹಳ್ಳಿಯಲ್ಲಿ 20 ರೂ., ತುಮಕೂರು ಮತ್ತು ಸಿರಾ ನಡುವಿನ ಕರಜೀವನಹಳ್ಳಿಯಲ್ಲಿ 100 ರೂ., ಹಿರಿಯೂರು ಮತ್ತು ಚಿತ್ರದುರ್ಗದ ನಡುವೆ ಇರುವ ಗುಯಿಲಾಳುನಲ್ಲಿ 100 ರೂ. ಟೋಲ್ ಪಾವತಿಸುತ್ತಿದ್ದರು.
ಹೊಸ ಪ್ಲಾಜಾದಲ್ಲಿ ಟೋಲ್ ದರ ಇನ್ನೂ ನಿಗದಿಪಡಿಸಲಾಗಿಲ್ಲ. ಗೊರಗುಂಟೆಪಾಳ್ಯದಿಂದ ನೆಲಮಂಗಲಕ್ಕೆ ಈಗಾಗಲೇ ಪ್ರವೇಶ-ನಿಯಂತ್ರಿತವಾಗಿದ್ದು, ಈಗ ನೆಲಮಂಗಲದಿಂದ ತುಮಕೂರು ನಡುವಿನ ಅಂತರವನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಕ್ರಮೇಣ ಚಿತ್ರದುರ್ಗದವರೆಗೆ ಪ್ರವೇಶ ನಿಯಂತ್ರಿತ ವಿಸ್ತರಣೆಯಾಗಲಿದೆ. ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣವನ್ನು ತಡೆರಹಿತ ಮತ್ತು ವೇಗವಾಗಿ ಮಾಡುವುದು ಇದರ ಗುರಿಯಾಗಿದೆ ಎಂದು ಅಧಿಕಾರಿ ಹೇಳಿದರು.
ಪ್ರವೇಶ-ನಿಯಂತ್ರಿತ ವಿಸ್ತರಣೆ ಎಂದರೆ ಟೋಲ್ ಪಾವತಿಸದೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ, ವಿಫಲವಾದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಭವಿಷ್ಯದಲ್ಲಿ ಎಲ್ಲಾ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಿಗೆ ಪ್ರವೇಶವನ್ನು ನಿಯಂತ್ರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಎನ್ಎಚ್ಎಐ ಅಧಿಕಾರಿಗಳು ಮತ್ತು ನಾಗರಿಕರ ಪ್ರಕಾರ, ನೆಲಮಂಗಲ ಟೋಲ್ ಪ್ಲಾಜಾದಲ್ಲಿ ಫಾಸ್ಟ್ಟ್ಯಾಗ್ ಖಾತೆಗಳಿಂದ ಹಣ ಕಡಿತಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಪ್ರಯಾಣಿಕರು ಈ ಟೋಲ್ ಪ್ಲಾಜಾ ಮೂಲಕ ಪ್ರಯಾಣಿಸದಿದ್ದರೂ ಸಹ ಹಣ ಕಡಿತಮಾಡುತ್ತಿರುವುದರ ಸಂಬಂಧ ದೂರುಗಳು ಬರುತ್ತಿವೆ.
“ನಾವು ದೂರುಗಳನ್ನು ಸ್ವೀಕರಿಸುತ್ತಿದ್ದೇವೆ ಮತ್ತು ವಿಷಯವನ್ನು ಸಚಿವಾಲಯಕ್ಕೆ ತಿಳಿಸಲಾಗಿದೆ. ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ, ಗುತ್ತಿಗೆದಾರರನ್ನು ಬದಲಾಯಿಸಲಾಗಿದೆ. ಆದರೆ ಸಮಸ್ಯೆಗಳು ಬೆಳೆಯುತ್ತಲೇ ಇವೆ. ಈ ಪ್ಲಾಜಾದಲ್ಲಿ ಬ್ಯಾರಿಕೇಡ್ ಇಲ್ಲದಿರುವುದು ಸಮಸ್ಯೆಯಾಗಿದೆ. ವಾಹನದ ವಿವರಗಳನ್ನು ದಾಖಲಿಸುವ RFID ರೀಡರ್ ಇದೆ. ಇದು ಕೆಲಸ ಮಾಡದಿದ್ದಲ್ಲಿ, ಸಿಬ್ಬಂದಿಗಳು ವಾಹನದ ಸಂಖ್ಯೆಯನ್ನು ಕೈಯಿಂದ ಬರೆದು ಸರ್ವರ್ಗೆ ಫೀಡ್ ಮಾಡುತ್ತಾರೆ. ದಾಖಲೆಗಳನ್ನು ಕೈಯ್ಯಲ್ಲಿ ಬರೆಯುವಾಗ ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ನಮಗೆ ದೂರುಗಳು ಬರುತ್ತಿವೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.