16 ಸ್ಥಳಗಳಲ್ಲಿ NIA ದಾಳಿ, ತೀವ್ರ ಶೋಧ

ಮಂಗಳೂರು: 

    ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬೆಳಗ್ಗೆ ರಾಜ್ಯದ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.

   ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಸುಮಾರು ಎರಡೂವರೆ ವರ್ಷಗಳ ಹಿಂದೆ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಸುಂಟಿಕೊಪ್ಪ ಸೇರಿದಂತೆ ಒಟ್ಟು 16 ಪ್ರದೇಶಗಳಲ್ಲಿ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.

   ಗುರುವಾರ ನಸುಕಿನಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಬ್ಬರ ಮನೆ ಹಾಗೂ ಸುಂಟಿಕೊಪ್ಪದಲ್ಲಿ ಒಬ್ಬರ ಮನೆ ಮೇಲೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ ದಾಖಲಾತಿಗಳನ್ನು‌ ಪರಿಶೀಲನೆ ನಡೆಸಿ, ಮನೆಯವರ ವಿಚಾರಣೆ ನಡೆಸಿ ತೆರಳಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ‌‌‌ ಕೊಡಗಿನ ಸಂಪರ್ಕವಿದ್ದು, ಹಾಗಾಗಿ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

   ಇನ್ನು ಈ ವರ್ಷ ಜೂನ್‌ನಲ್ಲಿ ಪ್ರಕರಣದ ಪ್ರಮುಖ ಆರೋಪಿ ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಎಂಬಾತ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ. ಈತನ ಬಂಧನಕ್ಕಾಗಿ ಬಲೆ ಬೀಸಿದ್ದ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಈತನನ್ನು ತಡೆದು ಬಂಧಿಸಿದ್ದರು. ಮೇ 10 ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್ ಮತ್ತು ಆತನ ಬಂದರುಗಳಲ್ಲಿ ಒಬ್ಬನಾದ ಮನ್ಸೂರ್ ಪಾಷಾ ಎಂಬಾತನನ್ನು ಬಂಧಿಸಿದ ನಂತರ ರಿಯಾಜ್ ನನ್ನು ಬಂಧಿಸಲಾಗಿತ್ತು. ಮತ್ತೋರ್ವ ಆರೋಪಿ ಅಬ್ದುಲ್ ರೆಹಮಾನ್ ನಿರ್ದೇಶನದ ಮೇರೆಗೆ ರಿಯಾಜ್ ವಿದೇಶದಿಂದ ಭಾರತಕ್ಕೆ ಮರಳಿದ್ದ. ಈ ಪ್ರಕರಣದ ಆರೋಪಿ ಅಬ್ದುಲ್ ರೆಹಮಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಪಾಷಾ ಜೊತೆಗೆ ರಿಯಾಜ್ ಕೂಡ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ನೆರವಾಗಿದ್ದರು ಎಂದು ಹೇಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪೈಚಾರ್ ಗೆ ಇವರೇ ಸಕಲೇಶಪುರದಲ್ಲಿ ಅಡಗಿಕೊಳ್ಳಲು ಆಶ್ರಯ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪೈಚಾರ್ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮಾಜಿ ಕಾರ್ಯದರ್ಶಿಯಾಗಿದ್ದ ಮತ್ತು ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮುಖ್ಯ ಸಂಚುಕೋರನಾಗಿದ್ದ ಎಂದು ಹೇಳಲಾಗಿದೆ. 

  ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ರಾತ್ರಿ 8 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಪ್ರಕರಣದ ತನಿಖೆಗೆ ಆರಂಭದಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು. ಬಳಿಕ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 19 ಆರೋಪಿಗಳ ಬಂಧನ ಕೂಡಾ ಆಗಿದೆ. ಇದೀಗ ತನಿಖೆಯ ಮುಂದುವರಿದ ಭಾಗವಾಗಿ ಎನ್ಐಎ ಇಂದು ರಾಜ್ಯದ 16 ಕಡೆಗಳಲ್ಲಿ ದಾಳಿ ನಡೆಸಿದೆ.

Recent Articles

spot_img

Related Stories

Share via
Copy link