ನವದೆಹಲಿ:
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಾನವ ಕಳ್ಳ ಸಾಗಣೆ ಹೆಚ್ಚಾಗಿದ್ದು , ರಾಷ್ಟ್ರೀಯ ತನಿಖಾ ದಳ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ದೇಶದ ಗುರುವಾರ ಆರು ರಾಜ್ಯಗಳ 22 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದು, ಆರೋಪಿಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ನಗದು ವಶಪಡಿಸಿಕೊಂಡಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಪಂಜಾಬ್ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು ಆರು ರಾಜ್ಯಗಳಲ್ಲಿ ರೇಡ್ ನಡೆದಿದೆ.
ಉದ್ಯೋಗ ಕೊಡಿಸುವ ನೆಪದಲ್ಲಿ ಯುವಕರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡುವುದು ಮತ್ತು ಸೈಬರ್ ವಂಚನೆಗಳಲ್ಲಿ ತೊಡಗಿರುವ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಯುವಕ-ಯುವತಿಯರನ್ನು ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ NIAಯಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಾವೋಸ್, ವಿಯೆಟ್ನಾಂ ಮತ್ತು ಕಾಂಬೋಡಿಯಾದಂತಹ ದೇಶಗಳಿಗೆ ಭಾರತೀಯ ಯುವಕರನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಬ್ಯೂರೋ ಆಫ್ ಇಮಿಗ್ರೇಷನ್ ಅಂಕಿಅಂಶಗಳ ಪ್ರಕಾರ, ಸಂದರ್ಶಕ ವೀಸಾದ ಅಡಿಯಲ್ಲಿ ಜನವರಿ 2022 ರಿಂದ ಮೇ 2024 ರ ನಡುವೆ ಥೈಲ್ಯಾಂಡ್, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಕಾಂಬೋಡಿಯಾಗೆ ಪ್ರಯಾಣಿಸಿದ 29,466 ಭಾರತೀಯರು ಕಾಣೆಯಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ 20-39ರ ವಯೋಮಾನದವರು, ಹಾಗೂ ಹೆಚ್ಚಿನವರು ಪಂಜಾಬ್, ಮಹಾರಾಷ್ಟ್ರ ಮತ್ತು ತಮಿಳುನಾಡಿನವರು. ಕಾಣೆಯಾದ ವ್ಯಕ್ತಿಗಳಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ಥೈಲ್ಯಾಂಡ್‌ನಿಂದ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.
ಕಾಂಬೋಡಿಯಾವೊಂದರಲ್ಲೇ 5,000 ಭಾರತೀಯ ಪ್ರಜೆಗಳು ಕಾಲ್ ಸೆಂಟರ್ ವಂಚನೆಗಳಲ್ಲಿ ಸಿಕ್ಕಿಬಿದ್ದಿರಬಹುದು ಎಂಬ ಊಹೆ ಇದೆ. ವರದಿಗಳ ಪ್ರಕಾರ, ನೋಮ್ ಪೆನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 1,000 ಕಳ್ಳಸಾಗಾಣಿಕೆ ಜಾಲದಲ್ಲಿ ಸಿಕ್ಕಿ ಬಿದ್ದಿದ್ದ ಭಾರತೀಯರನ್ನು ವಾಪಸ್ ಕಳುಹಿಸಿದೆ. ಆಗಸ್ಟ್‌ನಲ್ಲಿ ಲಾವೋಸ್‌ನಿಂದ 47 ಯುವಕರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಇದೆ.