ನಿಗಮ ಮಂಡಲಿಗಳಿಗೆ ಅಧ್ಯಕ್ಷರ ಹೆಸರು ಅಂತಿಮಗೊಳಿಸಿದ ಸಿಎಂ, ಡಿಸಿಎಂ…..!

ನವದೆಹಲಿ:

    ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ ಶಿವಕುಮಾರ್  ನವದೆಹಲಿಯಲ್ಲಿ ಒಟ್ಟಿಗೆ ಕೂತು 20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ದೆಹಲಿಗೆ ಆಗಮಿಸಿದ್ದ ಸಿಎಂ ಹಾಗೂ ಡಿಸಿಎಂ, ಹೆಸರುಗಳನ್ನು ಅಂತಿಮಗೊಳಿಸಿ ಉಸ್ತುವಾರಿ ಭೇಟಿ ಮಾಡಿ ಪಟ್ಟಿಯನ್ನು ಓಕೆ ಮಾಡಿಸಿಕೊಂಡರು ಎಂದು ತಿಳಿದುಬಂದಿದೆ.

   ಗುರುವಾರ ಸಂಜೆ ಕರ್ನಾಟಕ ಭವನ ಭವನದಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್, ಒಂದೇ ಕಾರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಮನೆಗೆ ಆಗಮಿಸಿದರು. ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ 20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ಸಿಕ್ಕಿದೆ. ಉಪಾಧ್ಯಕ್ಷರು, ಸದಸ್ಯರ ನೇಮಕ ಪ್ರಕ್ರಿಯೆ ಮುಂದಿನ ಹಂತದಲ್ಲಿ ಸಭೆ ಮಾಡಿ ತೀರ್ಮಾನ ಮಾಡಲು ನಾಯಕರು ನಿರ್ಧರಿಸಿದ್ದಾರೆ. ಸಿಎಂ, ಡಿಸಿಎಂ ಬೆಂಗಳೂರಿಗೆ ವಾಪಸ್ ಆಗ್ತಿದ್ದಂತೆ 20 ಅಧ್ಯಕ್ಷರ ಪಟ್ಟಿ ಘೋಷಣೆ ಆಗುವ ಸಾಧ್ಯತೆ ಇದೆ. ಇನ್ನುಳಿದಂತೆ 4 ಎಂಎಲ್​ಸಿ ಸ್ಥಾನ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್​ಗೆ ಬಿಡಲಾಗಿದೆ‌.

   ಸುರ್ಜೇವಾಲ ಮನೆಯಲ್ಲಿ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ತಮ್ಮ ಭದ್ರತಾ ಸಿಬ್ಬಂದಿಯ ವಾಹನವನ್ನು ವಾಪಸ್ ಕಳಿಸಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸುರ್ಜೆವಾಲ ಜೊತೆ ಒಂದೇ ಕಾರಿನಲ್ಲಿ ಊಟಕ್ಕೆಂದು ಹೊರಗೆ ಹೋದರು. ಆ ಮೂಲಕ ಕೈ ನಾಯಕರು ದೆಹಲಿಯಿಂದ ಒಗ್ಗಟ್ಟಿನ ಮಂತ್ರ ಸಾರಿದ್ದಾರೆ.

   ಈ ಮಧ್ಯೆ ಇಂದು ದೆಹಲಿಯ ಥಾಲ್ ಕಠೋರಾ ಇಂಡೋರ್ ಸ್ಟೇಡಿಯಂನಲ್ಲಿ ಎಐಸಿಸಿ ಓಬಿಸಿ ಘಟಕದ ವತಿಯಿಂದ ಭಾಗಿದಾರಿ ‘ನ್ಯಾಯ್’ ಸಮ್ಮೇಳನ ನಡೆಯಲಿದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಇಡೀ ದೇಶದಲ್ಲಿ ಒಬಿಸಿ ನಾಯಕ ಹಾಗೂ ಏಕೈಕ ಒಬಿಸಿ ಸಿಎಂ ಸಿದ್ದರಾಮಯ್ಯ ಆಗಿದ್ದು ಎಐಸಿಸಿ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

Recent Articles

spot_img

Related Stories

Share via
Copy link