ಪ್ಯಾರಿಸ್
ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಪದಕದ ಬಣ್ಣ ಬದಲಾಗಿದೆ. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ನೀರಜ್ ಚೋಪ್ರಾ, ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 89.45 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಬಾರಿ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಪ್ರತಿ ಕ್ರೀಡಾಕೂಟದಲ್ಲೂ ಉತ್ತಮ ಆರಂಭ ಪಡೆಯುತ್ತಿದ್ದ ನೀರಜ್ಗೆ ಈ ಬಾರಿ ಕೊಂಚ ಆಘಾತ ಕಾದಿತ್ತು. ಅವರ ಮೊದಲ ಎಸೆತವೇ ಫೌಲ್ ಆಗಿತ್ತು. ಈ ಥ್ರೋ 86 ಮೀಟರ್‌ಗಿಂತ ಹೆಚ್ಚಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಮೊದಲ ಎಸೆತವನ್ನು ಫೌಲ್ ಮಾಡಿದರೂ, ನಂತರದ ಎಸೆತದಲ್ಲಿ 92.97 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಭದ್ರಪಡಿಸಿಕೊಂಡರು. ಇದರೊಂದಿಗೆ ಹೊಸ ಒಲಿಂಪಿಕ್ ದಾಖಲೆಯನ್ನೂ ನಿರ್ಮಿಸಿದರು. ಮುಂದಿನ ಪ್ರಯತ್ನದಲ್ಲಿ ಪುನರಾಗಮನ ಮಾಡಿದ ನೀರಜ್, 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡರು.
ಈ ಮೂಲಕ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅರ್ಷದ್ ನದೀಮ್ ಪಾತ್ರರಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ 32 ವರ್ಷಗಳ ಒಲಿಂಪಿಕ್ಸ್ ಪದಕದ ಬರವನ್ನು ನದೀಮ್ ನೀಗಿಸಿದ್ದಾರೆ. ಇದಕ್ಕೂ ಮುನ್ನ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು.
ಬೆಳ್ಳಿ ಪದಕವನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ನೀರಜ್, ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಭಾರತದ ನಾಲ್ಕನೇ ಅಥ್ಲೀಟ್ ಎನಿಸಿಕೊಂಡರು. ಮೂರು ವರ್ಷಗಳ ಹಿಂದೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ 87.58 ಮೀಟರ್ ದೂರ ಎಸೆದು ಚಿನ್ನ ಗೆದ್ದಿದ್ದರು. ಇದರೊಂದಿಗೆ, ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಎರಡನೇ ಅಥ್ಲೀಟ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಯಾವುದೇ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಫೈನಲ್‌ನಲ್ಲಿ, ನೀರಜ್ ಜೂಲಿಯನ್ ವೆಬರ್, ಜಾಕೋಬ್ ವಾಡ್ಲೆಚ್ ಮತ್ತು ಜೊಹಾನ್ಸ್ ವೆಟರ್ ಅವರನ್ನು ಹಿಂದಿಕ್ಕಿ ಈ ಐತಿಹಾಸಿಕ ಸಾಧನೆ ಮಾಡಿದ್ದರು.