ಬೆಂಗಳೂರು:
ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.ಎಫ್ ಐಆರ್ ನಲ್ಲಿ ತನ್ನ ಹೆಸರಿರುವುದನ್ನು ಪ್ರಶ್ನಿಸಿ ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಎಫ್ಐಆರ್ ರದ್ದುಪಡಿಸಿದೆ.
ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿಸಿದ ದೂರಿನ ನಂತರ ವಿಶೇಷ ನ್ಯಾಯಾಲಯವೊಂದರ ನಿರ್ದೇಶನದಂತೆ ನಿರ್ಮಲಾ ಸೀತಾರಾಮನ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 384( ಸುಲಿಗೆಗೆ ಶಿಕ್ಷೆ) 120 ಬಿ (ಕ್ರಿಮಿನಲ್ ಪಿತೂರಿ) 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಕಾರ್ಯಗಳು) ಅಡಿಯಲ್ಲಿ ಸೀತಾರಾಮನ್, ಇಡಿ ಅಧಿಕಾರಿಗಳು ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರು ಕೂಡಾ ಎಫ್ ಐಆರ್ ನಲ್ಲಿತ್ತು.
ಆರೋಪಿಗಳು ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ಮಾಡಿದ್ದು, 8,000 ಕೋಟಿ ರೂ. ಗೂ ಅಧಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಿ ‘ಜನಾಧಿಕಾರ ಸಂಘರ್ಷ ಪರಿಷತ್’ (ಜೆಎಸ್‌ಪಿ) ಸಹ-ಸಂಸ್ಥಾಪಕ ಆದರ್ಶ್ ಆರ್ ಅಯ್ಯರ್ ಅವರು ದೂರು ದಾಖಲಿಸಿದ್ದರು. ಇಡಿ ಅಧಿಕಾರಿಗಳ ನೆರವು ಮತ್ತು ಬೆಂಬಲದ ಮೂಲಕ ಸೀತಾರಾಮನ್, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಇತರ ಪದಾಧಿಕಾರಿಗಳ ಅನುಕೂಲಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಸುಲಿಗೆಗೆ ಅನುಕೂಲ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ರದ್ದುಗೊಳಿಸಿತ್ತು. ಇದು ಸಂವಿಧಾನದ ಅಡಿಯ ಮಾಹಿತಿ ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು.