ಬೆಂಗಳೂರು:
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಸಿ.ಪಿ. ಯೋಗೇಶ್ವರ್ ಇದೀಗ ಮತ್ತೆ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ನಿಂದ ಸಿ.ಪಿ. ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಲಾಗಿದೆ. ಈ ವೇಳೆ ತಂದೆಯ ವಿರುದ್ಧ ಅವರ ಮಗಳು ನಿಶಾ ಯೋಗೇಶ್ವರ್ ದಿನಕ್ಕೊಂದು ವಿಡಿಯೋ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಅವರು ಅಪ್ಪನ ಗೆಲುವಿಗೆ ಅಡ್ಡಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ವಿಡಿಯೋ ಹೇಳಿಕೆಯನ್ನು ಫೇಸ್ಬುಕ್ನಲ್ಲಿ ಬಿಡುಗಡೆ ಮಾಡಿರುವ ನಿಶಾ ಯೋಗೇಶ್ವರ್, ನಮ್ಮ ಕುಟುಂಬದ ಗುಟ್ಟನ್ನು ರಟ್ಟು ಮಾಡುತ್ತೇನೆ. ನನ್ನ ತಂದೆಯಿಂದ ನಾನು ಸಾಕಷ್ಟು ಅವಮಾನ ಅನುಭವಿಸಿದ್ದೇನೆ. ನಾನು 13 ವರ್ಷದವಳಿದ್ದಾಗ ನನ್ನ ತಂದೆ ಬೇರೊಂದು ಸಂಸಾರವನ್ನು ಕಟ್ಟಿಕೊಂಡಿದ್ದನ್ನು ಪತ್ರಿಕೆಗಳ ಮೂಲಕ ತಿಳಿದುಕೊಂಡೆ. ನನಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ನನ್ನ ಜೀವನವನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಲು ಒಬ್ಬಳೇ ಬಾಂಬೆಗೆ ತೆರಳಿ ಕಚೇರಿಗಳಿಗೆ ಅಲೆದೆ. ಯಾವ ಅವಕಾಶಗಳೂ ಸಿಗಲಿಲ್ಲ. ಅಲ್ಲಿಂದ ವಾಪಸ್ ಕರೆಸಿಕೊಳ್ಳಲು ಅಪ್ಪ ತುಂಬಾ ಪ್ರಯತ್ನಪಟ್ಟರು. ಅವರ ಮಾತು ಕೇಳಿ 2016ರಲ್ಲಿ ವಾಪಸ್ ಬಂದೆ. ಅನಂತರ ಅವರ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆ. ಇಬ್ಬರೂ ಒಟ್ಟಾಗಿ ಬ್ಯುಸಿನೆಸ್ ಮಾಡೋಣ ಎಂದು ಭರವಸೆ ನೀಡಿದರು. ಇದನ್ನು ನಂಬಿ ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬಹುದು ಎಂದುಕೊಂಡಿದ್ದೆ. ನನಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗಬಹುದು ಎಂಬ ಚರ್ಚೆಗಳು ಕೂಡ ಆಗಿದ್ದವು. ಅದನ್ನೂ ಕೂಡ ತಂದೆಯೇ ತಪ್ಪಿಸಿದ್ದಾರೆ. ನನಗೆ ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗಲಿಲ್ಲ ಎಂದು ನಿಶಾ ಹೇಳಿದ್ದಾರೆ.
ಅಮೆರಿಕಕ್ಕೆ ಹೋಗಿ 4 ವರ್ಷ ವ್ಯಾಸಂಗ ಮುಗಿಸಿ ವಾಪಸ್ ಬಂದಾಗ ಓದಿದ್ದು ಸಾಕು, ಇಲ್ಲೇ ಬದುಕು ಕಟ್ಟಿಕೋ ಎಂದು ಅಪ್ಪ ಹೇಳಿದರು. ಶಿಕ್ಷಣ ನಿಲ್ಲಿಸಬಾರದು ಎಂದು ಮತ್ತೆ ಅಮೆರಿಕಾಗೆ ಹೋಗಿ ಕೊನೆ ಸೆಮಿಸ್ಟರ್ ಮುಗಿಸಿ ಪದವಿ ಪಡೆದುಕೊಂಡೆ. ಇಲ್ಲಿ ಬಂದು ಕೆಲಸ ಕೊಡಿಸಿ ಎಂದಾಗ 3 ವರ್ಷ ಅಲೆಸಿದರು. ನನ್ನ ತಾಯಿ, ತಮ್ಮನ ಭವಿಷ್ಯದ ಬಗ್ಗೆಯೂ ನನಗೆ ಭಯವಿತ್ತು. ಸಿನಿಮಾದಿಂದ ಬಂದ ಅವಕಾಶವನ್ನು ಕೂಡ ಅವರು ತಪ್ಪಿಸಿದರು ಎಂದು ನಿಶಾ ಹೇಳಿದ್ದಾರೆ.
ನನಗೆ ಮದುವೆ ಮಾಡಿಸುವುದಾಗಿ ಹೇಳಿ 2 ವರ್ಷ ಸಮಯ ದೂಡಿದರು. ಈ ನಡುವೆ ನನ್ನ ಮಲತಾಯಿ ಶೀಲ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ಮಗಳ ಮದುವೆಗಾಗಿ ಬ್ರೋಕರ್ನನ್ನು ಭೇಟಿ ಮಾಡಿಸಿದ ಮೊದಲ ತಂದೆ ಯೋಗೇಶ್ವರ್. ನಿನ್ನ ಹಣೆಬರಹದಲ್ಲಿ ಭಿಕ್ಷೆ ಬೇಡುವುದು ಬರೆದಿದ್ದರೆ ಭಿಕ್ಷೆಯನ್ನೇ ಬೇಡಬೇಕು ಎಂದು ಅಪ್ಪ ಹೇಳಿದ್ದರು. ಅವರು ಹೇಳಿದಂತೆ ನಾನೀಗ ನೆಲೆಯಿಲ್ಲದೆ ರಸ್ತೆಯಲ್ಲಿದ್ದೇನೆ ಎಂದು ನಿಶಾ ಬೇಸರ ಹೊರಹಾಕಿದ್ದಾರೆ.
ನನ್ನ ಅಪ್ಪ ಯಾವ ತಂದೆಯೂ ಮಗಳಿಗೆ ಹೇಳದ ಭಾಷೆ ಬಳಸಿ ನನಗೆ ಬೈಯುತ್ತಿದ್ದರು. ರಕ್ತ ಬರುವಂತೆ ಹೊಡೆಯುತ್ತಿದ್ದರು. ಅವರು ನನ್ನ ಜೀವನವನ್ನೇ ಹಾಳು ಮಾಡಿದರು ಎಂದು ನಿಶಾ ಆರೋಪಿಸಿದ್ದಾರೆ.
