ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ನೀತಾ ಅಂಬಾನಿ ಅಭಿನಂದನೆ

ಮುಂಬೈ: 

    ಭಾರತ ಮಹಿಳಾ ಕ್ರಿಕೆಟ್ ತಂಡ ಭಾನುವಾರ ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಪ್‌ ಫೈನಲ್‌  ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ  ತಂಡವನ್ನು 52 ರನ್‌ ಅಂತರದಿಂದ ಮಣಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆ ಮಾಡಿತು. ಈ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ನೀತಾ ಎಂ. ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರು, ಹರ್ಮನ್‌ಪ್ರೀತ್‌ ಕೌರ್ ಬಳಗವನ್ನು ಅಭಿನಂದಿಸಿದರು ಮತ್ತು ದೇಶಕ್ಕೆ ಅಪಾರ ಸಂತೋಷ, ಸಂಭ್ರಮ ತಂದಿದ್ದಕ್ಕಾಗಿ ತಂಡಕ್ಕೆ ಧನ್ಯವಾದ ತಿಳಿಸಿದರು.

   ‘ಮಧ್ಯರಾತ್ರಿಯ ಸಮಯದಲ್ಲಿ ನಮ್ಮ ಹುಡುಗಿಯರು ಮೊದಲ ಐಸಿಸಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ನೀವು ಧೈರ್ಯ, ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಆಡಿದ ರೀತಿ ಇಡೀ ರಾಷ್ಟ್ರವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ನಾವೆಲ್ಲರೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ನಾನು ಧನ್ಯವಾದ ಮತ್ತು ಜೈ ಹಿಂದ್ ಎಂದು ಹೇಳಲು ಬಯಸುತ್ತೇನೆ’ ಎಂದು ನೀತಾ ಎಂ. ಅಂಬಾನಿ ಪಂದ್ಯದ ಬಳಿಕ ಜಿಯೋ ಹಾಟ್‌ಸ್ಟಾರ್‌ ಸಂದರ್ಶನದಲ್ಲಿ ಹೇಳಿದರು.

   ಸಿಖ್ಖರ ನಾಡಿನ ಸುಪುತ್ರಿ ಹರ್ಮನ್ ಪ್ರೀತ್ ಕೌರ್ ಅವರು ಭಾರತ ಕ್ರಿಕೆಟ್ ತಂಡವನ್ನು ಈ ಸಲದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಮುನ್ನಡೆಸಿದ್ದಾರೆ. ಪಂಜಾಬ್‌ನ ಮೋಗಾ ನಗರವು ಹರ್ಮನ್‌ಪ್ರೀತ್ ಕೌರ್ ಅವರ ಹುಟ್ಟೂರು. ಹರ್ಮನ್‌ಪ್ರೀತ್ ಕೌರ್ ಮೊಗಾದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು, ಬಳಿಕ ಜ್ಞಾನ ಜ್ಯೋತಿ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿ ಪಡೆದು, ಬಳಿಕ ಅದರಲ್ಲಿಯೇ ಮುಂದುವರೆ ಯುವ ದಿಟ್ಟ ನಿರ್ಧಾರ ಕೈಗೊಂಡರು.

   ಅವರ ಕುಟುಂಬವು ಕೂಡ ಮಗಳಿಗೆ ಸದಾ ಬೆನ್ನೆಲುಬಾಗಿ ನಿಂತಿತು. ಹರ್ಮನ್‌ಪ್ರೀತ್ ಅವರ ಬಾಲ್ಯದ ತರಬೇತುದಾರ ಪ್ರದೀಪ್ ಶರ್ಮಾ, ಮಾತನಾಡಿದ್ದು, ‘ಸಣ್ಣ ಪಟ್ಟಣವೊಂದರಿಂದ ಬಂದಿರುವ ಹರ್ಮನ್‌ಪ್ರೀತ್ ಕೌರ್ ಇಂದು ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಿರುವುದು ಇಡೀ ದೇಶ ಮತ್ತು ಮೋಗಾ ನಗರಕ್ಕೆ ಬಹಳ ಹೆಮ್ಮೆಯ ಸಂಗತಿ. ಹರ್ಮನ್ ಅವರು ಹುಡುಗ ರಿಗಿಂತಲೂ ಹೆಚ್ಚು ಶ್ರಮ ವಹಿಸುತ್ತಿದ್ದರು. ಯಾವಾಗಲೂ ಏಕಾಗ್ರತೆಯಿಂದ ಇರುತ್ತಿದ್ದ ಹರ್ಮನ್, ಯಾವುದೇ ಸವಾಲಿಗೂ ಹಿಂದೇಟು ಹಾಕುತ್ತಿರಲಿಲ್ಲ’ ಎಂದಿದ್ದಾರೆ.

    ಹರ್ಮನ್ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಪ್ರಾರಂಭಿಸಿದವರು. ಬಡ ಕುಟುಂಬದಿಂದ ಬಂದಿರುವ ಅವರು ಆರನೇ ವಯಸ್ಸಿನಲ್ಲಿಯೇ ತನ್ನ ತಂದೆಯೊಂದಿಗೆ ಮೈದಾನದಲ್ಲಿ ಆಟವಾಡಲು ಪ್ರಾರಂಭಿಸಿದರು. ಮೊದಲಿಗೆ ಫುಟ್ಬಾಲ್, ನಂತರ ಹಾಕಿ ಮತ್ತು ಬಳಿಕ ಕ್ರಿಕೆಟ್ ಆಡಲು ಆರಂಭಿಸಿದರು. 

   30 ರಿಂದ 35 ಹುಡುಗರಲ್ಲಿ ಹರ್ಮನ್ ಒಬ್ಬಳೇ ಹುಡುಗಿಯಾಗಿದ್ದ ಕಾರಣ ಹರ್ಮನ್ ತಂದೆಯೂ ಕೂಡ ಆರಂಭದಲ್ಲಿ ಅವರನ್ನು ಆಡಲು ಕಳಿಸಲು ಹಿಂಜರಿದರು. ಆದರೆ ಹರ್ಮನ್ ಮಾತ್ರ ಯಾವಾಗಲೂ ಆಟವಾಡಲು ಉತ್ಸುಕರಾಗಿರುತ್ತಿದ್ದರು. ಟೀಕೆಗಳು ಅವರನ್ನು ಆಟದಿಂದ ದೂರವಿಡಲು ಅವರು ಎಂದಿಗೂ ಬಿಡಲಿಲ್ಲ. ಅವರ ಅದೇ ದೃಢಸಂಕಲ್ಪವು ಅವರನ್ನು ಯಶಸ್ಸಿನ ಮೆಟ್ಟಿಲೇರಿಸಿದೆ. 

   1989 ಮಾರ್ಚ್ 8ರಂದು ಮೋಗಾದಲ್ಲಿ ಜನಿಸಿದ ಹರ್ಮನ್ ಪ್ರೀತ್ ಕೌರ್ ಅವರು ದಿಟ್ಟ ಹೋರಾಟ, ಸಮರ್ಪಣೆಯ ಇಂದು ಯಶಸ್ಸಿನ ಶಿಖರವೇರಿದ್ದಾರೆ. ಅವರ ತಂದೆ ಹಮಿಂದರ್ ಸಿಂಗ್ ಭುಲ್ಲರ್, ವಾಲಿಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದರು. 2014ರಲ್ಲಿ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಮುಂಬೈಗೆ ತೆರಳಿದರು. ಅವರ ಪೋಷಕರೂ ಪ್ರಸ್ತುತ ಮುಂಬೈನಲ್ಲಿದ್ದು, ಮಗಳ ಯಶಸ್ಸಿಗಾಗಿ ಅವರು ಸದಾ ಹುರಿದುಂಬಿಸುತ್ತಿದ್ದಾರೆ.

Recent Articles

spot_img

Related Stories

Share via
Copy link