ಮಂಗಳೂರು
ಅಡಿಕೆ ಕ್ಯಾನ್ಸರ್ ಕಾರಕ ಎಂಬ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಮಾಹಿತಿ ಆಧಾರಿತ ವಿಶ್ವ ಅರೋಗ್ಯ ಸಂಸ್ಥೆಯ ವರದಿ, ಮುಖ್ಯವಾಗಿ ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ, ಇದೀಗ ರಾಜ್ಯದ ಪ್ರತಿಷ್ಠಿತ ವಿವಿಯೊಂದರ ಅಧ್ಯಯನ ವರದಿ ಭಿನ್ನವಾದುದನ್ನೇ ಹೇಳಿದೆ. ನಿಟ್ಟೆ ವಿವಿಯ ವಿಜ್ಞಾನಿ ಪ್ರ. ಇಡ್ಯಾ ಕರುಣಾಸಾಗರ್ ಮತ್ತವರ ತಂಡ ಮಹತ್ವದ ಸಂಶೋಧನೆ ನಡೆಸಿದ್ದು, ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಬದಲಿಗೆ ಕ್ಯಾನ್ಸರ್ ಪ್ರತಿಬಂಧಕ ಅಂಶ ಅಡಿಕೆಯಲ್ಲಿದೆ ಎಂದು ತಿಳಿಸಿದೆ.
ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಐಎಆರ್ಸಿ ಅಧ್ಯಯನ ವರದಿ ಏಕಾಏಕಿ ವರ್ಗೀಕರಿಸಿತ್ತು. ಪಾನ್, ಪಾನ್ ಮಸಾಲಾ, ಗುಟ್ಕಾ ಇತ್ಯಾದಿ ಸೇವಿಸುವುದರಿಂದ ಉಂಟಾಗುವ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿತ್ತು. ಆದರೆ, ಇದು ಪರಿಪೂರ್ಣ ಅಧ್ಯಯನ ಅಲ್ಲ ಎಂದು ಕ್ಯಾಂಪ್ಕೋ ವಾದಿಸಿತ್ತು.
ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋ, ಭಾರತದಾದ್ಯಂತ ಸಂಗ್ರಹಣೆ ಮತ್ತು ಮಾರುಕಟ್ಟೆ ಜಾಲವನ್ನು ಹೊಂದಿದೆ. ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಮಾರಾಟ ಮತ್ತು ಸಂಸ್ಕರಣೆ ಮಾಡುತ್ತಿದೆ. ಹೀಗಾಗಿ ಕ್ಯಾಂಪ್ಕೋದ ಒತ್ತಡ ಹಿನ್ನಲೆ ಇದೀಗ ಕೇಂದ್ರ ಸರ್ಕಾರದಿಂದಲೂ ಅಡಿಕೆಯ ಮರು ಸಂಶೋಧನೆಗೆ ಒಪ್ಪಿಗೆ ದೊರೆತಿದೆ ಎನ್ನಲಾಗಿದೆ.
ಐಎಆರ್ಸಿ ಸಂಶೋಧನಾ ಅಧ್ಯಯನಗಳಿಗೆ ಬಳಸಿದ್ದ ಮಾದರಿಗಳಲ್ಲಿ ಲೋಪ ಕಂಡು ಬಂದಿದೆ ಎಂದು ಕ್ಯಾಂಪ್ಕೋ ಆರೋಪಿಸಿದೆ. ಇದೀಗ, ಇದರ ಸತ್ಯಾಸತ್ಯತೆಯ ಪರಾಮರ್ಶೆಗಾಗಿ ಅಧ್ಯಯನ ಕೈಗೊಳ್ಳಲು ಕೇಂದ್ರ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ.
ಅಡಿಕೆಯ ಕುರಿತು ಹೆಚ್ಚಿನ ಸಂಶೋಧನೆಗೆ ಕಾಸರಗೋಡಿನಲ್ಲಿರುವ ಐಸಿಎಆರ್ನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಕೂಡ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಕೃಷಿ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ. ಮೂರು ವರ್ಷಗಳ ಕಾಲ ನಡೆಯುವ ಈ ಅಧ್ಯಯನಕ್ಕೆ 9.90 ಕೋಟಿ ರೂ. ವೆಚ್ಚವಾಗಲಿದೆ. ಅಧ್ಯಯನಕ್ಕೆ ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹಣಕಾಸಿನ ನೆರವು ಲಭ್ಯವಾಗುತ್ತಿದ್ದಂತೆಯೇ ಸಿಪಿಸಿಆರ್‌ಐ ಉಸ್ತುವಾರಿಯಲ್ಲೇ ಅಧ್ಯಯನ ನಡೆಯಲಿದೆ.
ಐಸಿಎಎಆರ್ ವರದಿ ಸತ್ಯಕ್ಕೆ ದೂರವಾದ ವಿಚಾರ. ಹೀಗಾಗಿ ಈ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಬೇಡ ಎಂದು ಕ್ಯಾಂಪ್ಕೋ ಅಭಯ ನೀಡಿದೆ. ನಾವು ನಿಟ್ಟೆ ವಿವಿ ಜೊತೆ ನಡೆಸಿದ ಸಂಶೋಧನೆಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವರದಿ ಬಂದಿದೆ. ಕ್ಯಾನ್ಸರ್ ಗುಣ ಮಾಡುವ ಶಕ್ತಿ ಅಡಿಕೆಯಲ್ಲಿದೆ ಎಂದು ಮಂಗಳೂರಿನಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕೆಂಪು ಅಡಿಕೆ ಮತ್ತು ಬಿಳಿ ಅಡಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಒಟ್ಟು ಸರ್ವೇಯಲ್ಲಿ ಅಡಿಕೆ ತಿನ್ನುವವರ ಸಂಖ್ಯೆ ಸಿಗಲಿಲ್ಲ. ಅದರ ಬಗ್ಗೆಯೂ ಅಧ್ಯಯನ ಮುಂದುವರೆದಿದೆ. ಚೆನ್ನೈನ ನಿವೃತ್ತ WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಭೇಟಿ ಮಾಡಿದ್ದೇವೆ. ನಮ್ಮ ವರದಿ ಬಗ್ಗೆ ಸಕರಾತ್ಮಕ ಸ್ಪಂದನೆ ನೀಡಿದ್ದಾರೆ. ಆದರೆ ಮಾನ್ಯತೆ ಪಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಂಶೋಧನೆ ಮಾಡಿಸಿ ಎಂದಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯರು ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವರು ಪ್ರತ್ಯೇಕ ಸಂಶೋಧನೆ ಮಾಡುವ ಭರವಸೆ ನೀಡಿದ್ದಾರೆ. ಅಲ್ಲಿ ತನಕ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನ ಒಪ್ಪದಿರಲು ನಿರ್ಧರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಸರಿಯಾದ ಉತ್ತರ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.