ಪ.ಬಂಗಾಳ:
ಪ.ಬಂಗಾಳದಲ್ಲಿ ಕೊರೋನಾ ಹರಡುವಿಕೆ ತಡೆಗಟ್ಟುವುದಕ್ಕೆ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಜುಲೈ 31 ವರೆಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ.
ಜೂ.24 ರಂದು ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದು, ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ಜೂ.30ಕ್ಕೆ ಮುಕ್ತಾಯಗೊಳ್ಳಲಿದೆ. ಪಶ್ಚಿಮ ಬಂಗಾಳದಲ್ಲಿ ಸರ್ವಪಕ್ಷ ಸಭೆಯ ಬಳಿಕ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ. ಲಾಕ್ ಡೌನ್ ವಿಸ್ತರಣೆ ಸಂಬಂಧ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಅಂತಿಮವಾಗಿ ಜುಲೈ ತಿಂಗಳಾಂತ್ಯದವರೆಗೆ ನಿರ್ಬಂಧ ಸಡಿಲಿಕೆಯೊಂದಿಗೆ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಲಾಯಿತು ಎಂದು ಹೇಳಿದ್ದಾರೆ.
ದೇಶಾದ್ಯಂತ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವು ಪ್ರದೇಶಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ಕೊರೋನಾ ಹಾಟ್ ಸ್ಪಾಟ್ ಗಳಿರುವ ಪ್ರದೇಶಗಳಲ್ಲಿ ಮತ್ತೊಮ್ಮೆ ಲಾಕ್ ಡೌನ್ ಘೋಷಿಸಲಾಗುತ್ತದೆಯೇ ಎಂಬ ಚರ್ಚೆಗಳ ನಡುವೆಯೇ ಪಶ್ಚಿಮ ಬಂಗಾಳ ಲಾಕ್ ಡೌನ್ ವಿಸ್ತರಣೆ ಮಾಡಿದೆ.