ಜೋಶಿ ಬದಲಾವಣೆ ಅಸಾಧ್ಯ : ಬಿ ಎಸ್‌ ವೈ

ಹುಬ್ಬಳ್ಳಿ

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಧಾರವಾಡದಿಂದ ಬೇರೆ ಕ್ಷೇತ್ರಕ್ಕೆ ಸ್ಥಳಾಂತರಿಸಬೇಕು ಎಂದು ವೀರಶೈವ-ಲಿಂಗಾಯತ ಸ್ವಾಮೀಜಿಗಳು ಕೇಂದ್ರ ಬಿಜೆಪಿ ನಾಯಕಕತ್ವವನ್ನು ಒತ್ತಾಯಿಸಿದೆ. ಆದರೆ, ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ.

   ಬುಧವಾರ ಇಲ್ಲಿನ ಮೂರುಸಾವಿರಮಠದ ಆವರಣದಲ್ಲಿ ವಿವಿಧ ಮಠಾಧೀಶರು ಚಿಂತನ ಮಂಥನ ಸಭೆ ನಡೆಸಿದರು. ಸಭೆಯಲ್ಲಿ ಧಾರವಾಡದಿಂದ ಜೋಶಿ ಅವರ ನಾಮಪತ್ರ ಸಲ್ಲಿಕೆ ವಿರೋಧಿಸಲು ನಿರ್ಧರಿಸಿದರು.

   ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು, ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್‌ ಜೋಶಿ ಬದಲಿಗೆ ಸೂಕ್ತ ಅಭ್ಯರ್ಥಿಯನ್ನು ಹಾಕಬೇಕು. ಮಾರ್ಚ್‌ 31ರೊಳಗೆ ಅಭ್ಯರ್ಥಿಯನ್ನು ಬದಲಾವಣೆ ಮಾಡದೇ ಹೋದರೆ ಏಪ್ರಿಲ್ 2ರಂದು ಮತ್ತೆ ಸಭೆ ನಡೆಸುತ್ತೇವೆ. ಮತ್ತೊಮ್ಮೆ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಚುನಾವಣಾ ಬಂದಾಗ ಮಾತ್ರ ಕೇಂದ್ರ ಸಚಿವರಿಗೆ ವೀರಶೈವ ಲಿಂಗಾಯತ ಸ್ವಾಮೀಜಿಗಳು ನೆನಪು ಆಗುತ್ತಾರೆ ಎಂದು ಕಿಡಿಕಾರಿದರು.

    ಸಭೆಯಲ್ಲಿ ಧಾರವಾಡ ಲೋಕಸಭಾ ಚುನಾವಣೆ ಸೇರಿ ದಕ್ಷಿಣ ಭಾರತದಲ್ಲಿ ನಡೆಯುವ ವಿವಿಧ ಚುನಾವಣೆಯಲ್ಲಿ ಮಠಾಧೀಶರು ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಸ್ತುತ ರಾಜಕೀಯ ವಿದ್ಯಾಮಾನ, ರಾಜ್ಯದ ಅಭಿವೃದ್ಧಿ ಹಾಗೂ ಇನ್ನಿತರ ಕುರಿತು ಚರ್ಚೆ ನಡೆಸಲಾಗಿದೆ. ಆದರೆ, ಧಾರವಾಡ ಲೋಕಸಭಾ ಚುನಾವಣೆಗೆ ತಮ್ಮನ್ನು ಕಣಕ್ಕೆ ಇಳಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ನಾಡಿನ ಅನೇಕ ಮಠಗಳ ಮಠಾಧೀಶರರು ಚಿಂಥನ ಮಂಥನ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಸ್ವಾಮೀಜಿಗಳು ಹೇಳಿದರು.

   ಬಿಎಸ್‌ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಹ್ಲಾದ್‌ ಜೋಶಿ, ತಾವೇ ಸಿಎಂ ಆಗಬೇಕೆಂದು ಪ್ರಲ್ಹಾದ್ ಜೋಶಿ ಜಾಕೆಟ್ ಹೊಲಿಸಿದ್ರು, ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು, ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಧಾರವಾಡ ಲೋಕಸಭಾ ಚುನಾವಣೆ ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಲಾಯಿತು. ಆದ್ದರಿಂದ ಪ್ರತಿಯೊಂದು ರೀತಿಯಲ್ಲಿ ನಮಗೆ ಅನ್ಯಾಯ ಆಗಿದೆ ಎಂದರು.

   ನಾನು ಸಹ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ನಮ್ಮ ಜೊತೆ ಸರಿಯಾಗಿ ಮಾತನಾಡಿದ್ದಿಲ್ಲ. ನಮ್ಮ ಕೆಲಸ ಮಾಡಲು ಲಿಂಗಾಯತ ನಾಯಕರು ಇಲ್ವಾ ಎಂದು ಕೇಳಿದ್ದರು. ಆದ್ದರಿಂದ ನಾವು ಕೂಡ ಈಗ ಬದಲಾವಣೆ ಬಯಸಿದ್ದೇವೆ ಎಂದು ಹೇಳಿದರು.

   ಇಂದು ನಡೆದ ಸಭೆಯಲ್ಲಿ ಮಠಾಧಿಪತಿಗಳು ಕೆಲವು ನಿರ್ಧಾರ ಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕು ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು, ಧಾರವಾಡ ಮತಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಟಿಕೆಟ್ ಘೋಷಣೆ ಆಗಿದೆ. ಅದನ್ನು ಬದಲಾವಣೆ ಮಾಡಬೇಕು, ಬೇರೆ ಕ್ಷೇತ್ರ ಇಲ್ಲವೇ ಅವರನ್ನು ಪಕ್ಷದ ಕೆಲಸಕ್ಕೆ ಬಳಸಬೇಕು.‌

   ಇಲ್ಲಿಯ ಮಾಜಿ ಸಿಎಂ ಬೇರೆ ಕ್ಷೇತ್ರ ಕೊಟ್ಟಂತೆ ಮತ್ತು ನಾಲ್ಕು ಸಾರಿ ಲಿಂಗಾಯತರು ಇವರ ಬೆನ್ನಿಗೆ ನಿಂತು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಆ ಉಪಕಾರಕ್ಕೆ ಜೋಶಿ ಕ್ಷೇತ್ರ ತ್ಯಾಗ ಮಾಡಲಿ. ಹಾಗೂ ಲಿಂಗಾಯತ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ? ಆದರೆ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಿ ಆರಿಸಿ ತರಲಿ ಎಂದರು.

   ಪ್ರಲ್ಹಾದ್ ಜೋಶಿ ಬದಲಾವಣೆಗೆ ಮುಖ್ಯ ಕಾರಣ ಎಂದರೇ, ಬಹುಸಂಖ್ಯಾತ ಲಿಂಗಾಯತ ಹಾಗೂ ಇತರ ಸಮಾಜದ ನಾಯಕರನ್ನು, ನೌಕರ, ವ್ಯಾಪಾರಿಗಳು ಸೇರಿದಂತೆ ಹಲವರು ಸಚಿವರಿಂದ ತುಳಿತಕ್ಕೆ ಒಳಗಾಗಿದ್ದಾರೆ. ಇವರ ಸೇಡಿನ ರಾಜಕಾರಣದಿಂದ ಅನೇಕ ನಾಯಕರು ಜಾತ್ಯಾತೀತವಾಗಿ ತುಳಿತಕ್ಕೆ ಒಳಗಾಗಿ, ಮಾನಸಿಕ, ದೈಹಿಕ, ಆರ್ಥಿಕ, ರಾಜಕೀಯವಾಗಿ ಕುಸಿದು ಬಿದ್ದಿದ್ದಾರೆ.

    ಮಹಿಳಾ ಪ್ರತಿನಿಧಿಗಳಿಗೂ ಇವರು ಅವಮಾನ ಮಾಡಿದ್ದಾರೆ. ಐಟಿ, ಇಡಿ ಇತರ ದಾಳಿಯ ದಾಳ ಮತ್ತು ಭಯ ಉಂಟು ಮಾಡಿ ಬಾಯಿ ಬಿಟ್ಟು ಮಾತನಾಡದ ಹಾಗೇ ಸ್ವತಂತ್ರ ಹೀನರ ದಾಸ್ಯತ್ವದಲ್ಲಿ ಬದುಕಿದ್ದಾರೆ. ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಪ್ರಲ್ಹಾದ್ ಜೋಶಿ ತಮ್ಮ ಹಿಂಭಾಲಕರನ್ನು ಸೇರಿಸಿ ಪ್ರಮಾಣಿಕರನ್ನು ನಾಶ ಮಾಡಿದ್ದಾರೆ.

   ಮಾಜಿ ಸಿಎಂ ಮರಳಿ ಪಕ್ಷಕ್ಕೆ ಹೋದಾಗ ಶುಭಾಶಯಗಳನ್ನು ಹೇಳಲು ಮನಸ್ಸಿದ್ದರೂ ಹಿಂಬಾಲಕರು ಇವರ ಭಯಕ್ಕೆ ಯಾರು ಅವರ ಮನೆಗೆ ಹೋಗದ ಹಾಗೇ ವಾತಾವರಣ ಸೃಷ್ಟಿಮಾಡಿದ್ದರು. ನಾವು ಈ ಹಿಂದೆ ಕೆಲಸದ ನಿಮಿತ್ತ ಕರೆ ಮಾಡಿದಾಗ ನಿಮ್ಮ ಸಮಾಜದ ನಾಯಕರು ಇಲ್ಲವೇ ಎಂದು ಹೇಳಿ ಅವಮಾನಿಸಿದರು. ಈ ಹಿನ್ನೆಲೆಯಲ್ಲಿ ಅವರಿಂದ ದೂರ ಉಳಿದು ಮೂರು ವರ್ಷ ಆಯಿತು.

   ನಮ್ಮ ಭೇಟಿಗೆ ಅವರಿಗೆ ಅವಕಾಶ ನೀಡಿಲ್ಲ. ಸಭೆಗಳಲ್ಲಿ ಮಾತನಾಡಿಸಿಲ್ಲ, ಸ್ವಾಮೀಜಿ ವಿರೋಧ ಬೇಡ ಎಂದು ಅವರ ಸಹೋದರನಿಗೆ ಸಲಹೆ ಕೊಟ್ಟರೇ ಅಂತಹ ಸ್ವಾಮೀಜಿಗಳು ನಮ್ಮ‌ ಮನೆಯ ಮುಂದೆ ಪ್ರತಿದಿನವೂ ನೂರಾರು ಜನರು ತಿರುಗಾಡುತ್ತಾರೆ ಎಂದು ಹೇಳುವ ಮೂಲಕ ಸಮಾಜದ ಶ್ರೀಗಳನ್ನು ಅವಮಾನ ಮಾಡಿದ್ದಾರೆ.

   ಕಲಘಟಗಿಯಲ್ಲಿ ಪಕ್ಷದ ಪ್ರಚಾರದ ಕಾರ್ಯಾಲಯ ಉದ್ಘಾಟನೆಗೆ ಸುಳ್ಳು ಹೇಳಿ ನಮ್ಮ ಸ್ವಾಮೀಜಿಗಳನ್ನು ಕರೆದು ತೇಜೋವಧೆ ಮಾಡಿ, ದುರುಪಯೋಗ ಪಡಿಸಿಕೊಂಡಿದ್ದಾರೆ. ತಮ್ಮ ಸಮಾಜದ ಸ್ವಾಮಿಗಳ ಹತ್ತಿರ ಹೊದಾಗ ನೆಲದ ಮೇಲೆ ಕೂಡುವ ಇವರು, ನಮ್ಮ ಜಗದ್ಗುರುಗಳ ಹತ್ತಿರ ಮತ್ತು ಮಠಾಧಿಪತಿಗಳ ಮಧ್ಯೆ ಕುಳಿತು ಲಿಂಗಾಯತ ಸ್ವಾಮೀಜಿಗಳು ಅನ್ಯ ಪಕ್ಷದ ಮತ್ತು ಅಪಪ್ರಚಾರಕ್ಕೆ ಕಾರಣರಾಗಿದ್ದಾರೆ. ಇದರೊಂದಿಗೆ ಹಲವು ಶ್ರೀಗಳು ಜೋಶಿಯವರ ಪುತ್ರಿ ವಿವಾಹ ಕಾರ್ಯಕ್ರಮಕ್ಕೆ ಕರೆದು ಕನಿಷ್ಠ ರೀತಿಯಲ್ಲಿ ನಡೆದು, ಭೀಕ್ಷುಕರ ಹಾಗೇ ನಡೆಸಿಕೊಂಡಿದ್ದಾರೆ ಎಂದು ಹರಿಹಾಯ್ದರು. 

   ಈ ನಡುವೆ ಸ್ವಾಮೀಜಿಗಳ ಈ ಬೇಡಿಕೆಯನ್ನು ಯಡಿಯೂರಪ್ಪ ಅವರು ನಿರಾಕರಿಸಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬದಲಾವಣೆಯ ಪ್ರಶ್ನೆ ಇಲ್ಲ. ಬಹುಶಃ ಶಿರಹಟ್ಟಿ ಫಕೀರ ದಿಂಗಾಲೇಶ್ವ ಸ್ವಾಮೀಜಿ ಜೋಶಿ ಅವರ ಬಗ್ಗೆ ತಪ್ಪಾಗಿ ತಿಳಿದಿರಬೇಕು. ನಾನು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮನವಲಿಸಲಾಗುವುದು ಎಂದು ಹೇಳಿದರು.

    ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಹಳ ದೊಡ್ಡ ಜನಪ್ರೀಯ ನಾಯಕರು. ಅವರು ಬಹಳ ಅಂತರದಿಂದ ಜಯಗಳಿಸುತ್ತಾರೆ. ಲಿಂಗಾಯತ ಸಮಾಜದ ಎಲ್ಲ ಸ್ವಾಮಿಗಳು ನಮ್ಮ ಪರವಾಗಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಅವರು ಜೋಶಿ ಅವರ ಮೇಲೆ ಮಾಡುತ್ತಿರುವ ಆರೋಪದ ಹಿಂದೆ ನಮ್ಮ ಪಕ್ಷದ ಯಾವ ನಾಯಕರು ಇಲ್ಲ. ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

    ಎಲ್ಲ ಸಮುದಾಯದ ಜನರನ್ನು ಜೊತೆಯಲ್ಲಿ ಕರೆದೊಯ್ಯುವ ಮೂಲಕ ದೊಡ್ಡ ವ್ಯಕ್ತಿಯಾಗಿ ಜೋಶಿ ಬೆಳೆದಿದ್ದಾರೆ. ಪ್ರಧಾನಿ ಮೋದಿ ಕೂಡ ಇದನ್ನು ಒಪ್ಪಿಕೊಂಡು ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ನೋಡುವವರಲ್ಲಿ ಕೆಲವು ತಪ್ಪು ತಿಳುವಳಿಕೆ ಇರಬಹುದು. ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಎಲ್ಲರೊಂದಿಗೂ ಮಾತನಾಡುತ್ತೇನೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap