ನವದೆಹಲಿ:
ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಸರ್ಕಾರವು 3,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರವನ್ನು ವಿಧಿಸಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದು ಇದು ಸುಳ್ಳು ಮತ್ತು ಆಧಾರರಹಿತ ವರದಿ ಎಂದು ಹಣಕಾಸು ಸಚಿವಾಲಯ ತಿಳಿಸಿದ್ದು, ಸರ್ಕಾರವು ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದೆ.
ಇತ್ತೀಚೆಗೆ ಕೆಲವು ಮಾಧ್ಯಮಗಳು ಕೇಂದ್ರ ಸರ್ಕಾರವು ವ್ಯಾಪಾರಿ ರಿಯಾಯಿತಿ ದರ ವಿಧಿಸಲು ಯೋಜನೆ ರೂಪಿಸುತ್ತಿದೆ ಎಂದು ಹೇಳಿದ ಬಳಿಕ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಇದಕ್ಕೆ ಸ್ಪಷ್ಟನೆಯನ್ನು ನೀಡಿದೆ.
ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ ವಿಧಿಸಲಾಗುತ್ತದೆ ಎನ್ನುವ ವರದಿಗಳನ್ನು ತಳ್ಳಿ ಹಾಕಿರುವ ಹಣಕಾಸು ಸಚಿವಾಲಯ, ಇದು ಒಂದು ಸುಳ್ಳು ಮತ್ತು ಆಧಾರ ರಹಿತ ವರದಿಯಾಗಿದೆ ಎಂದು ಹೇಳಿದೆ. ಇದು ಕೇವಲ ಊಹಾಪೋಹ ವರದಿಯಾಗಿದೆ. ಇದು ನಾಗರಿಕರಲ್ಲಿ ಅನಗತ್ಯ ಭಯ ಮತ್ತು ಅನುಮಾನವನ್ನು ಉಂಟುಮಾಡುತ್ತವೆ ಎಂದು ತಿಳಿಸಿದೆ.
ಸರ್ಕಾರವು 3,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರವನ್ನು ಪರಿಚಯಿಸಲು ಯೋಜನೆ ಮಾಡಿಕೊಳ್ಳುತ್ತಿದೆ. ಸಾಲದಾತರಿಗೆ ವಹಿವಾಟಿನ ಮೌಲ್ಯದ ಮೇಲೆ ಎಂಡಿಆರ್ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಯುಪಿಐ ವಹಿವಾಟುಗಳಿಗೆ 2020ರ ಜನವರಿಯಿಂದ ಜಾರಿಯಲ್ಲಿರುವ ಶೂನ್ಯ ಎಂಡಿಆರ್ ನೀತಿಯನ್ನು ಮರುಪರಿಶೀಲಿಸುವಂತೆ ಭಾರತೀಯ ಪಾವತಿ ಮಂಡಳಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ. ಇದರೊಂದಿಗೆ ಅದು ರೂಪೇ ಡೆಬಿಟ್ ಕಾರ್ಡ್ ಮತ್ತು ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಯುಪಿಐಗೆ ಶೇ. 0.3 ರಷ್ಟು ಎಂಡಿಆರ್ ಅನ್ನು ಪರಿಚಯಿಸುವಂತೆ ಹೇಳಿದೆ. ಪ್ರಸ್ತುತ ದೇಶಾದ್ಯಂತ ಯುಪಿಐ ವಹಿವಾಟಿನ ಒಟ್ಟು ಪ್ರಮಾಣವು 131 ಬಿಲಿಯನ್ ಗಿಂತಲೂ ಹೆಚ್ಚಾಗಿದ್ದು, ಇದು 2023-24 ರ ಹಣಕಾಸು ವರ್ಷದಲ್ಲ 200 ಲಕ್ಷ ಕೋಟಿ ರೂ. ವಹಿವಾಟನ್ನು ದಾಖಲಿಸಿದೆ.
