ಬೆಂಗಳೂರು:
ಹೊಸ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸದ್ಯಕ್ಕೆ ಅನುಮತಿ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಹಾರ ಸಚಿವರು, ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ನಾವೇ ಓಪನ್ ಮಾಡಿಲ್ಲ. ಅದಕ್ಕೆ ಕಾರಣ ಏನು ಅಂತಾ ಸದ್ಯದಲ್ಲೇ ಹೇಳುತ್ತೇನೆ. ಇನ್ನೂ ಒಂದಿಷ್ಟು ದಿನ ಎಪಿಎಲ್, ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಹೊಸ ಕಾರ್ಡುಗಳಿಗೆ ಅನುಮತಿ ನೀಡದಿರುವ ಇಲಾಖೆಯ ನಿರ್ಧಾರ ಹಲವರಿಗೆ ನಿರಾಸೆ ತಂದಿದೆ.
ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ಈ ತಿಂಗಳು 25 ಅಥವಾ 26ರೊಳಗೆ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಕಳೆದ ತಿಂಗಳು ಡಿಬಿಟಿ ವಿಚಾರವಾಗಿ ಹಣ ಹಾಕುವುದು ತಡವಾಯಿತು ಎಂದು ಮುನಿಯಪ್ಪ ಅವರು ಹೇಳಿದ್ದಾರೆ.
ಇನ್ನು ಆಹಾರ ಇಲಾಖೆಯಲ್ಲಿ 2,181 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.