‘ನ್ಯಾಟೋ’ ಸದಸ್ಯತ್ವಕ್ಕಾಗಿ ಯಾರ ಮುಂದೆಯೂ ಮಂಡಿಯೂರಲ್ಲ, ರಷ್ಯಾ ಜೊತೆ ಸಂಧಾನಕ್ಕೆ ಸಿದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಕೀವ್:

 ಇನ್ನು ಮುಂದೆ ನ್ಯಾಟೋ ಸದಸ್ಯತ್ವಕ್ಕಾಗಿ ಯಾರ ಮುಂದೆಯೂ ಮಂಡಿಯೂರಲ್ಲ ಎಂದು ಘೋಷಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಇದೇ ವೇಳೆ ರಷ್ಯಾ ಜೊತೆ ಸಂಧಾನಕ್ಕೆ ಸಿದ್ಧ ಎಂದೂ ಹೇಳಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಕೇಳುವ ವಿಚಾರದಲ್ಲಿ ನಾನಿನ್ನು ಮೌನ ವಹಿಸುತ್ತೇನೆ.

ಉಕ್ರೇನ್​​ಗೆ ಸದಸ್ಯತ್ವ ನೀಡಲು ನ್ಯಾಟೋ ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಾಯ್ಮಾತಲ್ಲಿ ಕೊಡುತ್ತೇವೆ ಎಂದು ಹೇಳುತ್ತಿತ್ತು. ಈ ನ್ಯಾಟೋ ಒಕ್ಕೂಟಕ್ಕೆ ರಷ್ಯಾ ವಿರುದ್ಧ ಹೋರಾಡಲು, ಆ ದೇಶವನ್ನು ಎದುರು ಹಾಕಿಕೊಳ್ಳಲು ಭಯ. ನಾನೊಂದು ದೇಶದ ಅಧ್ಯಕ್ಷನಾಗಿ ಯಾವುದೇ ವಿಚಾರಕ್ಕೂ ಇನ್ನೊಬ್ಬರ ಎದುರು ಮೊಣಕಾಲೂರಿಗೆ ಕುಳಿತು ಬೇಡಿಕೊಳ್ಳಲಾರೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಹೇಳಿದ್ದಾರೆ.

ಅಷ್ಟೇ ಅಲ್ಲ, ರಷ್ಯಾದ ಪರವಾಗಿರುವ ಪೂರ್ವ ಉಕ್ರೇನ್​​ನ ಎರಡು ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಸ್ಥಿತಿ ಬಗ್ಗೆ ಸಂಧಾನ ಮಾಡಿಕೊಳ್ಳಲು ಸಿದ್ಧರಿರುವುದಾಗಿಯೂ ಅವರು ತಿಳಿಸಿದ್ದು, ಈ ಎರಡೂ ಪ್ರದೇಶಗಳು ಉಕ್ರೇನ್​ನಲ್ಲಿದ್ದರೂ ಕೂಡ ಇಲ್ಲಿರುವ ಬಂಡುಕೋರರು ರಷ್ಯಾ ಪರವಾಗಿಯೇ ಇದ್ದಾರೆ.

2014ರಿಂದಲೂ ಕೀವ್​ ವಿರುದ್ಧವೇ ಬಡಿದಾಡಿಕೊಂಡು ಬಂದಿದ್ದಾರೆ. ಹಾಗೇ, ಫೆ.24ರಂದು ಉಕ್ರೇನ್​ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಘೋಷಿಸುವುದಕ್ಕೂ ಮೊದಲು ಇವೆರಡೂ ಭೂಪ್ರದೇಶಗಳು ಸ್ವತಂತ್ರ ಎಂದು ಪುಟಿನ್​ ಘೋಷಿಸಿದ್ದಾರೆ. ಇದೀಗ ಈ ಭೂಪ್ರದೇಶಗಳ ಕುರಿತಂತೆ ರಷ್ಯಾದ ಜತೆ ಹೊಂದಾಣಿಕೆ ಮಾಡಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ರಷ್ಯಾ ಉಕ್ರೇನ್​ ವಿರುದ್ಧ ಸಮರ ಸಾರಲು ಹಲವು ಕಾರಣಗಳಿದ್ದರೂ, ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಲು ಮುಂದಾಗಿದ್ದು ಬಹುಮುಖ್ಯ ಕಾರಣ. ನ್ಯಾಟೋ ಕೂಡ ರಷ್ಯಾದ ಮನವಿಯನ್ನು ತಿರಸ್ಕರಿಸುತ್ತಲೇ ಬಂತು.

ಹೀಗಾಗಿ ರಷ್ಯಾ ಪುಟ್ಟ ರಾಷ್ಟ್ರ ಉಕ್ರೇನ್​ ವಿರುದ್ಧ ಸಮರವನ್ನೇ ಸಾರಿತು. ಆದರೆ ರಷ್ಯಾ ಪಡೆ ಆಕ್ರಮಣ ಮಾಡುತ್ತಿದ್ದಂತೆ ನ್ಯಾಟೋ ಅಂತರ ಕಾಯ್ದುಕೊಂಡಿದೆ. ಝೆಲೆನ್ಸ್ಕಿ ಬಹಿರಂಗವಾಗಿಯೇ ಸಹಾಯ ಕೇಳಿದರೂ ನ್ಯಾಟೋ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಬಗ್ಗೆಯೇ ಝೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಝೆಲೆನ್ಸ್ಕಿ ಅವರು ಯುದ್ಧದ ಹಿನ್ನೆಲೆಯಲ್ಲಿ ಪೋಲೆಂಡ್ಗೆ ಓಡಿಹೋದ ಎಂಬ ವರದಿಗಳನ್ನು ನಿರಾಕರಿಸಿದರು. ಅವರು ಕೀವ್‌ನಲ್ಲಿರುವ ಅವರ ಅಧಿಕೃತ ಕಚೇರಿಯಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಲೊಕೇಶನ್ ಶೇರ್ ಮಾಡಲಾಗಿದೆ.

ರಷ್ಯಾದ ಆಕ್ರಮಣವು ಉಕ್ರೇನ್‌ನೊಂದಿಗೆ ಕೊನೆಗೊಳ್ಳುವುದಿಲ್ಲ ಮತ್ತು ವಿಶ್ವದ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ದಿನ ದಿನಕ್ಕೆ ಉಕ್ರೇನ್ ಜೊತೆಗೆ ಪ್ರಪಂಚದ ಇತರ ಭಾಗಗಳ ಮೇಲೆ ದಾಳಿ ಮಾಡಲು ರಷ್ಯಾ ತಯಾರಾಗುತ್ತದೆ ಎಂದು ಪುಟಿನ್ ಉದ್ದೇಶಿಸಿ ಝೆಲನ್ಸ್ಕೀ ಕೆಂಡಕಾರಿದ್ದಾರೆ.

ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡುವ ವಿಚಾರದಲ್ಲಿ ತನ್ನದು ಸ್ಪಷ್ಟ ವಿರೋಧ ಎಂದು ರಷ್ಯಾ ಈಗಾಗಲೇ ಸ್ಪಷ್ಟಪಡಿಸಿದೆ. ಯುರೋಪ್​​ನಲ್ಲಿ ಶೀತಲ ಸಮರ ಎದ್ದಾಗ, ಸೋವಿಯತ್​ ಒಕ್ಕೂಟದಿಂದ ಯುರೋಪ್​​ ಅನ್ನು ರಕ್ಷಣೆ ಮಾಡುವ ಸಲುವಾಗಿ ಈ ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ) ರಚಿಸಲಾಗಿತ್ತು.

ಈ ಹಿಂದೆ ಸೋವಿಯತ್​ ಒಕ್ಕೂಟದಲ್ಲಿದ್ದು ಬೇರ್ಪಟ್ಟ ದೇಶಗಳಿಗೆ ಸದಸ್ಯತ್ವ ನೀಡುವ ಮೂಲಕ ನ್ಯಾಟೋ ಪೂರ್ವ ಯುರೋಪ್​​ನಲ್ಲಿ ಮತ್ತಷ್ಟು ಪ್ರಾಬಲ್ಯ ವಿಸ್ತರಿಸುತ್ತಿದೆ. ಇದು ಸಹಜವಾಗಿಯೇ ರಷ್ಯಾವನ್ನು ಕೆರಳಿಸಿದೆ. ಇಷ್ಟು ದಿನ ನ್ಯಾಟೋವನ್ನು ನಂಬಿಕೊಂಡಿದ್ದ ಝೆಲೆನ್ಸ್ಕಿ ಈಗ ನ್ಯಾಟೋ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link