ಬೆಂಗಳೂರು
ಕರ್ನಾಟಕದ ಜನ ಬಹಳ ಪ್ರಬುದ್ಧರಾಗಿದ್ದು ಇಂಥ ಟೀಕೆ ಟಿಪ್ಪಣಿಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 5 ವರ್ಷಗಳಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರ ಬಹಳಷ್ಟು ಪ್ರಗತಿಯನ್ನು ಹೊಂದಿ, ಎಲ್ಲಾ ರಂಗಗಳಲ್ಲಿಯೂ ಶಾಸಕ ಸಿದ್ದು ಸವದಿಯವರ ನೇತೃತ್ವದಲ್ಲಿ ಮುಂದುವರೆದಿದೆ. ಇದೇ ರೀತಿ ರಾಜ್ಯದ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿಯಾಗುತ್ತಿವೆ ಎಂದರು.
ಅಭಿವೃದ್ಧಿಯ ಪರ್ವ ಕರ್ನಾಟಕದಲ್ಲಿ ಪ್ರಾರಂಭವಾಗಿದೆ. ಕೃಷಿ, ನೀರಾವರಿ, ಔದ್ಯೋಗೀಕರಣ, ಸಾಮಾಜಿಕ ವಲಯ ಸೇರಿದಂತೆ ಎಲ್ಲಾ ವಲಯಗಳಲ್ಲಿ, ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ಇದನ್ನು ಸಹಿಸಲಾರದೆ ಆಧಾರ ರಹಿತವಾದ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ನಾವು ಜನರ ಬಳಿಗೆ ಹೋಗುತ್ತೇವೆ. ಜನರು ನಮ್ಮ ಕೆಲಸಕ್ಕೆ ಬೆಲೆ ಕೊಡಲಿದ್ದಾರೆ ಎಂಬ ವಿಶ್ವಾಸ ವಿದೆ. ಇನ್ನಷ್ಟು ಕೆಲಸ ಆಗಬೇಕೆಂಬ ಸಂದೇಶವನ್ನು ಬಿಜೆಪಿಗೆ ಮತ ಹಾಕುವ ಮೂಲಕ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಸಿಎಂ ಸ್ಥಾನಕ್ಕೆ ಏರ್ಪಟ್ಟಿರುವ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ಕರ್ನಾಟಕದ ಜನತೆ ಕಾಂಗ್ರೆಸ್ಸಿನ ಎಲ್ಲಾ ನಾಯಕರನ್ನು ಪರೀಕ್ಷೆ ಮಾಡಿ ಕೈಬಿಟ್ಟಿದ್ದಾರೆ. ಅಧಿಕಾರ ಕೊಟ್ಟು ಪರೀಕ್ಷೆ ಮಾಡಿದ್ದಾರೆ. ಅವರ ಆಡಳಿತದಲ್ಲಿ ಏನೆಲ್ಲಾ ನಡೆದಿದೆ ಎಂದು ಜನ ಮರೆತಿಲ್ಲ. ಅವರು ಮರೆತಿರಬಹುದು. ಹೀಗಾಗಿ ಅವರು ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅಧಿಕಾರಕ್ಕೆ ಬಾರದ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿರುವುದಕ್ಕೆ ಎಷ್ಟರಮಟ್ಟಿಗೆ ಮಹತ್ವ ನೀಡಬೇಕೆಂದು ಜನ ತೀರ್ಮಾನ ಮಾಡುತ್ತಾರೆ ಎಂದರು.
ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಪ್ರತಿ ಬಾರಿ ಬಂದಾಗಲೂ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿಗೆ ಉದ್ಘಾಟನೆ ಮಾಡಲು ಬಂದಿದ್ದು, ಸಾಮಾಜಿಕ ಮಹತ್ವವುಳ್ಳ ಲಂಬಾಣಿ ಜನಕ್ಕೆ ಹಕ್ಕುಪತ್ರ ವಿತರಣೆ, ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆ, ಜಲ್ ಜೀವನ್ ಮಿಷನ್ ಉದ್ಘಾಟನೆಗೆ ಬಂದಿದ್ದಾರೆ. ಪ್ರತಿ ಬಾರಿಯೂ ಉದ್ಘಾಟನಾ ಕೆಲಸಕ್ಕೆ ಬಂದಿದ್ದಾರೆ. ಈ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆೆಟ್‌ನಲ್ಲಿ ಅತಿ ಹೆಚ್ಚು ಕೇಂದ್ರದಿಂದ ನೆರವು ಬಂದಿದೆ. ರಾಜ್ಯವೂ ಕೂಡ ಅದಕ್ಕೆ ಸರಿಸಮಾನವಾಗಿ ಅನುದಾನ ಮೀಸಲಿಟ್ಟಿದೆ. ಈ ಬಾರಿ ಅಭಿವೃದ್ಧಿ ಪರ್ವ ಎಂದು ತಿಳಿಸಿದರು.
ತೇರದಾಳದಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿಲ್ಲವೆಂದು ಬಿಜೆಪಿ ಮುಖಂಡರು ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಪಕ್ಷದ ಆಂತರಿಕ ವಿಚಾರಗಳನ್ನು ಮಾತನಾಡಿ ಸರಿಪಡಿಸಲಾಗುವುದು. ಸೋನಿಯಾ ಗಾಂಧಿ ನಿವೃತ್ತಿ ಬಗ್ಗೆ ಸುಳಿವು ನೀಡಿರುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಅದು ಅವರ ಸ್ವಂತ ವಿಚಾರ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
