ಮಂಡ್ಯ :
ಬರಗಾಲದ ಪರಿಣಾಮ ಫಸಲು ಕೊರತೆಯಿಂದ ಜಿಲ್ಲೆಯಲ್ಲಿಎಳನೀರಿಗೆ ಅಭಾವ ಸೃಷ್ಟಿಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ನಿತ್ಯ ಎಳನೀರಿನ ಬೆಲೆ 50 ರೂ. ದಾಟಿದೆ. ಕಳೆದ ವರ್ಷ 40 ರೂ. ಇದ್ದ ದರ ಈಗ ಏಕಾಏಕಿ 10 ರೂ. ಹೆಚ್ಚಾಗಿದೆ. ಇದು ಗ್ರಾಹಕರ ಕೈ ಸುಡುತ್ತಿದ್ದರೆ, ರೈತರಿಗೂ ಸೂಕ್ತ ದರ ಸಿಗದಾಗಿದೆ.
ಫಸಲು ಕಡಿಮೆಯಾಗಿರುವ ಕಾರಣ ಸಹಜವಾಗಿಯೇ ತೆಂಗು ಮತ್ತು ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಎಳನೀರಿಗೆ ಬಂಪರ್ ಬೆಲೆ ಬಂದಿದೆ. ನಾಲ್ಕೈದು ತಿಂಗಳ ಹಿಂದೆ ಕೇವಲ 20-25 ರೂ. ಇದ್ದ ಒಂದು ಎಳನೀರಿನ ಬೆಲೆ ಈಗ 50 ರೂ.ದಾಟಿದೆ.
ಮರದಿಂದ ಎಳನೀರು ಇಳಿಸುವುದು, ವಾಹನಗಳಿಗೆ ತುಂಬುದು, ಸಾಗಣೆ ಖರ್ಚು ಎಲ್ಲವೂ ವ್ಯಾ ಪಾರಿಗಳದು. ಈ ಎಲ್ಲ ವೆಚ್ಚವನ್ನು ಸೇರಿಸಿ ನಗರದ ಮುಕ್ತ ಮಾರುಕಟ್ಟೆಯಲ್ಲಿ 50 ರೂ.ಗೆ ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದ ವರ್ತಕರಿಗೆ ಹೆಚ್ಚು ಲಾಭವಾಗುತ್ತಿದೆ. ಜನರು 50 ರೂ. ನೀಡಿದರೆ ರೈತರಿಗೆ ಸಿಗುತ್ತಿರುವುದು ಅದರಲ್ಲಿಅರ್ಧದಷ್ಟು ಹಣ ಮಾತ್ರ.
ನೀರಿನ ಅಭಾವದಿಂದ ಮರಗಳಲ್ಲೇ ಎಳನೀರಿನ ಫಸಲು ಕಡಿಮೆಯಾಗಿದೆ. ಇದರಿಂದ ಎಳನೀರು ಇಳಿಸುವ ಪ್ರಮಾಣವೂ ಕಡಿಮೆಯಾಗಿದೆ. ಜತೆಗೆ, ನೀರಿನಲ್ಲದೆ ಬಹುತೇಕ ಮರಗಳು ಒಣಗುತ್ತಿದ್ದು, ಅಂತಹ ಮರಗಳಲ್ಲಿನ ಗೊನೆಗಳಲ್ಲಿ ಎಂಟತ್ತು ಎಳನೀರು ಮಾತ್ರ ಬಿಡುತ್ತಿವೆ.
ಮದ್ದೂರಿನ ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಕನಿಷ್ಠ 7 ರೂ.ನಿಂದ ಗರಿಷ್ಠ 44 ರೂ.ವರೆಗೆ ಎಳನೀರು ಮಾರಾಟವಾಗುತ್ತಿದೆ. ವರ್ತಕರು ರೈತರಿಂದ ಎಳನೀರು ಖರೀದಿಸಿ, ಮದ್ದೂರು ಮಾರುಕಟ್ಟೆಗೆ ತರುತ್ತಿದ್ದಾರೆ. ಅಲ್ಲಿ ದಲ್ಲಾಳಿಗಳು ಎಳನೀರಿನ ಗಾತ್ರ ಆಧರಿಸಿ, ಲಾಟ್‌ಗಳಿಗೆ ಬೀಟ್ ಕೂಗಿ ಬೆಲೆ ನಿಗದಿಪಡಿಸುತ್ತಾರೆ
ಈ ಬೀಟ್ ಕೂಗುವ ಪ್ರಕ್ರಿಯೆಯಲ್ಲಿ ಗಾತ್ರದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ತೀರಾ ಸಣ್ಣದಾದ ಎಳನೀರನ್ನು ಪ್ರತ್ಯೇಕವಾಗಿಟ್ಟು, ಅವುಗಳಿಗೆ 7 ರೂ.ನಿಂದ 10 ರೂ.ವರೆಗೆ ಬೆಲೆ ನಿಗದಿಪಡಿಸಲಾಗುತ್ತದೆ. ಮಧ್ಯಮ ಗಾತ್ರದ ಎಳನಿರಿಗೆ 32 ರೂ., ದಪ್ಪದಾದ ಎ ಳನೀರಿಗೆ 43-44 ರೂ.ವರೆಗೆ ಬೆಲೆ ನಿಗದಿಯಾಗುತ್ತದೆ. ಎಳನೀರಿನ ಬುರುಡೆ ಮೇಲೆ ಎಲ್ಲೂ ಗಾಯಗಳಾಗದ, ನುಣುಪಾಗಿರುವ ಎಳನೀರಿಗೆ ಹೆಚ್ಚು ಬೆಲೆ.