ತುಮಕೂರು:
ಕಳೆದ ಕೆಲವು ದಿನಗಳ ಕಾಲ ನಿರಂತರ ಮಳೆಯಾಯಿತು. ತುಂತುರು ಹನಿ ರೂಪದಲ್ಲಿ ಬಿದ್ದ ಮಳೆ ಭೂಮಿಯ ಮೇಲ್ಭಾಗಕ್ಕಷ್ಟೇ ತೇವಾಂಶ ನೀಡಿ ಮತ್ತೆ ಮರೆಯಾಗಿದೆ. ತುಮಕೂರು ನಗರ ಸೇರಿದಂತೆ ಕೆಲವು ಭಾಗಗಳಲ್ಲಷ್ಟೆ ಮಳೆಯಾಗಿದ್ದು, ಉಳಿದಂತೆ ಗ್ರಾಮೀಣ ಪ್ರದೇಶಗಳ ಹಲವು ಕಡೆಗಳಲ್ಲಿ ವರುಣ ಕೃಪೆತೋರಿಲ್ಲ. ಕಳೆದ ಒಂದು ತಿಂಗಳಿನಿಂದ ಮೋಡ ಮುಸುಕಿದ ವಾತಾವರಣದಲ್ಲಿಯೇ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುರೆಸುತ್ತಾ ಬಂದಿದ್ದಾರೆ.
ಇದೀಗ ಮಳೆ ತರುವ ಮೋಡಗಳು ಕ್ಷೀಣಿಸಿದ್ದು, ರೈತರು ಆಗಸದತ್ತ ಮುಖ ಮಾಡುತ್ತಿದ್ದಾರೆ. ಎಲ್ಲ ಕಡೆ ರಾಗಿ ಸೇರಿದಂತೆ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬಿತ್ತನೆ ಕಾರ್ಯ ಆರಂಭವಾಗಿದೆ. ಭೂಮಿಯಲ್ಲಿ ಬೆಳೆ ಮೊಳಕೆಯೊಡೆದಿರುವುದು ರಾಗಿ ನಾಟಿ ಮಾಡಲು ಸಿದ್ಧತೆಯಾಗಿರುವುದು, ಮಳೆ ಆಗಮನಕ್ಕೆ ರೈತರು ಕಾದು ಕುಳಿತಿರುವುದು ಸಾಮಾನ್ಯ ದೃಶ್ಯಗಳಾಗಿವೆ. ಇನ್ನು ಕೆಲವು ದಿನ ಮಳೆ ಬಾರದೆ ಹೋದರೆ ಹೊಲದಲ್ಲಿರುವ ರಾಗಿ ಪೈರಿನ ಹಸಿರು ಮಾಯವಾಗಿ ಬಿಸಿಲಿಗೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರಾಗಿ ಬಿತ್ತನೆ ಮತ್ತು ನಾಟಿ ಮಾಡುವ ರೈತರಿದ್ದಾರೆ. ಇತ್ತೀಚಿನ ಮಳೆಗೆ ಭೂಮಿ ಹದ ಮಾಡಿ ರಾಗಿಪೈರು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಕೆಲವು ಕಡೆಗಳಲ್ಲಿ ಈಗಾಗಲೇ ಬಿತ್ತನೆ ಮತ್ತು ಪೈರು ನಾಟಿ ಮಾಡುವ ಪ್ರಕ್ರಿಯೆಗಳು ಮುಗಿದಿವೆ. ಆದರೆ ಮಳೆರಾಯನ ಅವಕೃಪೆಗೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವು ಕಡೆಗಳಲ್ಲಿ ನೀರಾವರಿ ವ್ಯವಸ್ಥೆ ಇರುವವರು ಅಲ್ಲಲ್ಲಿ ಅವಳಡಿಸಿಕೊಂಡು ನೀರು ಹಾಯಿಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ರಾಗಿ ಮಡಿಗೆ ಬಿಂದಿಗೆಗಳಲ್ಲಿ ನೀರು ಹೊತ್ತೊಯ್ಯುವ ದೃಶ್ಯ ಕಂಡುಬರುತ್ತಿದೆ.
ಕೃಷಿ ಯಾವತ್ತೂ ಲಾಭದಾಯಕವಲ್ಲ ಎಂಬುದನ್ನು ರಾಗಿ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಮಳೆಯನ್ನೇ ನಂಬಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರು ರಾಗಿಯನ್ನು ಹೆಚ್ಚು ನಂಬಿದ್ದಾರೆ ಮತ್ತು ಅವಲಂಬಿಸಿದ್ದಾರೆ. ಸಣ್ಣಪುಟ್ಟ ರೈತರು, ನೀರಾವರಿ ರಹಿತ ರೈತರು ರಾಗಿ ಬೆಳೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದು ಅವರಿಗೆ ಅನಿವಾರ್ಯ. ಆದರೆ ಇತ್ತೀಚಿನ ಹೊಸ ಹೊಸ ಬೆಳವಣಿಗೆಗಳು ಇವರನ್ನೆಲ್ಲಾ ಕೃಷಿಯಿಂದಲೇ ದೂರವಾಗುವಂತೆ ಮಾಡುತ್ತಿವೆ. ಹೀಗಾದೆ ಮುಂದಿನ ದಿನಗಳಲ್ಲಿ ರಾಗಿ ಕೃಷಿಯಿಂದ ದೂರು ಉಳಿಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಈ ನಡುವೆ ವಿದ್ಯುತ್ ಕಣ್ಣಾಮುಚ್ಚಾಲೆ ಎಲ್ಲಡೆ ಉಂಟಾಗಿದೆ. ಮೊದಲೇ ಮಳೆ ಕೈಕೊಟ್ಟಿದೆ. ಈಗಲಾದರೂ ಸರಿಯಾದ ಕರೆಂಟ್ ನೀಡಬಾರದೆ. ಕೇವಲ 4-5 ಗಂಟೆ ನೀಡಿದರೆ ಇಟ್ಟಿರುವ ಬೆಳೆಗಳನ್ನು ಉಳಿಸಿಕೊಳ್ಳುವ ಮಾರ್ಗವಾದರೂ ಹೇಗೆ? ಕರೆಂಟ್ ಮುಂದೆಯೇ ಕುಳಿತು ಜಪ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇನ್ನು ಹಲವು ಕಡೆಗಳಲ್ಲಿ ವಿದ್ಯುತ್ ಲೈನ್‌ಗಳಿಗೆ ಜಂಗಲ್ ಅಡಚಣೆಯನ್ನುಂಟು ಮಾಡುತ್ತಿದ್ದರೂ ಸಂಬಂಧಪಟ್ಟ ಲೈನ್‌ಮ್ಯಾನ್‌ಗಳು ಅಸಡ್ಡೆ ತೋರುತ್ತಿದ್ದಾರೆಂಬ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಆಗಾಗ ವಿದ್ಯುತ್ ತೆಗೆಯುವುದರಿಂದ ಫೀಜ್‌ಗಳು ಹೋಗುವುದಲ್ಲದೆ, ಕೇಬಲ್ ಕೂಡಾ ಬರಸ್ಟ್ ಆಗುತ್ತಿವೆ. ವಿದ್ಯುತ್ ಇಲಾಖೆಗೆ ಫೋನ್ ಮಾಡಿದರೆ ಮೆನ್‌ಗಳನ್ನು ಕಳಿಸುತ್ತೇವೆ ಎನ್ನುತ್ತಾರೆಯೇ ವಿನಃ ಬರುವುದೇ ಇಲ್ಲ.
ಇನ್ನು ಕೆಲವು ಕಡೆ ಬಂದರೂ ಕಾಟಾಚಾರಕ್ಕೆಂಬಂತೆ ಒಂದೆರಡು ಕಡೆ ಜಂಗಲ್ ತೆಗೆದು ಹೋಗುತ್ತಾರೆ. ಟ್ರಾನ್ಸ್ಫರ‍್ಮರ್ ಸುತ್ತಲೂ ಜಂಗಲ್ ಬೆಳೆದಿದೆ, ಬಳ್ಳಿಗಳು ಹಬ್ಬಿಕೊಂಡಿದ್ದರೂ ಅವುಗಳ ತೆರವಿಗೆ ಹೋಗುವುದಿಲ್ಲ. ಇದು ಇಲಾಖಾ ಸಿಬ್ಬಂದಿಯ ಬೇಜವಾಬ್ದಾರಿ ಎಂದು ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಜಂಗಲ್ ಬೆಳೆದಿರುವ ಕಡೆಗಳಿಗೆ ಸಿಬ್ಬಂದಿಯನ್ನು ಕಳುಹಿಸಿ ಜಂಗಲ್ ತೆರವುಗೊಳಿಸುವ ಕಾರ್ಯ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಮಾಡಬೇಕೆಂಬುದು ರೈತರ ಮನವಿಯಾಗಿದೆ.
ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ, ಕೊರಟಗೆರೆ, ತುಮಕೂರು ತಾಲ್ಲೂಕು ಸೇರಿದಂತೆ ಮೊದಲಾದ ಕಡೆಗಳಲ್ಲಿ ರಾಗಿ ಹೆಚ್ಚು ಬೆಳೆಯುವ ಪ್ರದೇಶಗಳಲ್ಲಿ ಈಗಾಗಲೇ ರೈತರು ಬಿತ್ತನೆ ಮಾಡಿದ್ದಾರೆ. ಹೊಲದಲ್ಲಿ ರಾಗಿ ಪೈರು ಭೂಮಿಯ ಮೇಲ್ಭಾಗದಲ್ಲಿ ಚಿಗುರೊಡೆದಿದೆ. ಇನ್ನು ಕೆಲವು ಕಡೆಗಳಲ್ಲಿ ಬಿತ್ತನೆಗಾಗಿ ರೈತರು ಕಾಯುತ್ತಿದ್ದಾರೆ. ಈಗಾಗಲೇ ಆಶ್ಲೇಷ ಮಳೆ ಮುಗಿಯುತ್ತಾ ಬಂದಿದ್ದು, ಬಿತ್ತನೆ ಸಮಯವೂ ಮುಗಿದು ಹೋಗಲಿದೆ. ನಿಗದಿತ ಕಾಲಕ್ಕೆ ಬಿತ್ತನೆ ಅಥವಾ ನಾಟಿ ಮಾಡದಿದ್ದರೆ ತಡವಾಗಿ ಮಾಡಿದರೂ ಪ್ರಯೋಜನಕ್ಕೆ ಬಾರದು. ಇದೇ ಆತಂಕದಲ್ಲಿ ರೈತರು ದಿನ ದೂಡುತ್ತಿದ್ದಾರೆ.
ಆರಂಭದಲ್ಲಿಯೂ ಅಷ್ಟೆ. ಪೂರ್ವ ಮುಂಗಾರು ಬಿತ್ತನೆಯ ಹೆಸರು, ಅಲಸಂದೆ, ಎಳ್ಳು, ಜೋಳ ಮೊದಲಾದವು ಕೈ ಹಿಡಿಯಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಫಸಲು ಚೆನ್ನಾಗಿ ಹಿಡಿಯಲಿಲ್ಲ, ಕಾಳೂ ಕಟ್ಟಲಿಲ್ಲ. ಕೆಲವು ಕಡೆ ಕಾಳು ಕಟ್ಟಿದರೂ ನವಿಲುಗಳ ಹಾವಳಿಗೆ ತತ್ತಾಗುತ್ತಿವೆ. ಹಿಂಗಾರು ಬಿತ್ತನೆ ವೇಳೆಗೆ ಮಳೆ ಬಂದು ಬಿತ್ತನೆ ಸಲೀಸಾಗಲಿದೆ ಎಂಬ ಕನಸು ಸಹ ಹುಸಿಯಾಗತೊಡಗಿದೆ. ಅಶ್ವಿನಿ, ಭರಣಿ, ಕೃತಿಕ, ರೋಹಿಣಿ ಮಳೆಗಳು ಕೆಲ ಕಡೆಗಳಲ್ಲಿ ಮಾತ್ರ ಸೋನೆ ಮಳೆಯಂತೆ ಬಂದು ಹೋಗಿದ್ದು, ಹಿಂಗಾರು ಚುರುಕಾಗುವ ಆಶಾಭಾವನೆ ಮೂಡಿತ್ತು. ಆದರೆ ಅಂತಹ ವಾತಾವರಣ ಕಂಡುಬರುತ್ತಿಲ್ಲ.
ಕಳೆದ ಒಂದು ತಿಂಗಳಿನಿಂದಲೂ ಮೋಡ ಮುಸುಕಿದ ವಾತಾವರಣವೇ ಇದೆ. ಇತ್ತೀಚೆಗಷ್ಟೇ ಬಿಸಿಲು ಕಾಣಿಸುತ್ತಿದೆ. ಇದೇ ರೀತಿ ಬಿಸಿಲು ಹೆಚ್ಚಾದರೆ ಹೊಲದೊಳಗಿನ ಪೈರುಗಳು ನೆಲದಲ್ಲೇ ಕಮರಿ ಹೋಗುತ್ತವೆ.
ಮಧುಗಿರಿ, ಪಾವಗಡ, ಶಿರಾ, ಕೊರಟಗೆರೆ ಕೆಲ ಭಾಗಗಳಲ್ಲಿ ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಅವರೆ ಇತ್ಯಾದಿ ಬೆಳೆಯುವ ವಾಡಿಕೆ ಇದೆ.
ಈಗಾಗಲೇ ಕೆಲವು ಕಡೆ ಬಿತ್ತನೆಯೂ ನಡೆದಿದೆ. ತುಂತುರು ಮಳೆಗೆ ಕೆಲವರು ಆತುರಾತುರವಾಗಿ ಬಿತ್ತನೆ ಮಾಡಿದ್ದಾರೆ. ಮೊಳಕೆಯೊಡೆದು ಫಸಲು ಚೆನ್ನಾಗಿ ಬರುತ್ತಿದೆ. ಆದರೆ ಕಳೆದ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣ ಮರೆಯಾಗಿ ಬಿಸಲು ಕಾಣಿಸಿಕೊಳ್ಳುತ್ತಿರುವುದರಿಂದ ಇಟ್ಟಿರುವ ಬೆಳೆಗಳೆಲ್ಲಾ ಒಣಗುವ ಹಂತ ತಲುಪಿವೆ. ಉತ್ತಮ ಮಳೆಯಾದರೆ ರಸಗೊಬ್ಬರ ಹಾಕಲು ಸಿದ್ಧತೆ ಮಾಡಿಕೊಂಡಿದ್ದರು. ಗೊಬ್ಬರವನ್ನೂ ದಾಸ್ತಾನು ಮಾಡಿಕೊಂಡಿದ್ದಾರೆ.
ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸುತ್ತಮುತ್ತ ಜುಲೈ ಮೊದಲ ವಾರವೇ ಕೆಲವರು ಶೇಂಗಾ ಬಿತ್ತನೆ ಮಾಡಿದ್ದರು. ಮಳೆ ಇಲ್ಲದ ಪರಿಣಾಮವಾಗಿ ಭೂಮಿಯಲ್ಲೇ ಕಾಳುಗಳು ಹಾಳಾಗಿ ಹೋಗತೊಡಗಿವೆ. ಬುಕ್ಕಪಟ್ಟಣ ಸುತ್ತಮುತ್ತಲ ಪ್ರದೇಶಗಳಲ್ಲಿ ಜೂನ್‌ನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬಿಸಿಲಿನ ಕಾವಿಗೆ ಒಣಗುವ ಪರಿಸ್ಥಿತಿ ಬಂದೊದಗಿದೆ. ಕುರಂಕೋಟೆ ಸುತ್ತಮುತ್ತ ಕೆಲವು ಕಡೆ ಹಸಿರಿನ ವಾತಾವರಣ ಇದ್ದರೂ ಎತ್ತರದ ಪ್ರದೇಶಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ. ತಡವಾಗಿ ಬಿತ್ತನೆ ಮಾಡುವವರು ಮಳೆಗಾಗಿ ಕಾಯುತ್ತಿದ್ದರೆ ಈಗಾಗಲೇ ಬಿತ್ತನೆ ಮಾಡಿದ್ದವರು ಫಸಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಇನ್ನು ಹೊಳವನಹಳ್ಳಿ ಸುತ್ತಮುತ್ತ ತುಂತುರು ಮಳೆಗೆ ಕೆಲವರು ಬಿತ್ತಿದರಾದರೂ ಹದ ಮಳೆ ಇಲ್ಲದ ಕಾರಣ ಸರಿಯಾಗಿ ಮೊಳಕೆಯಾಗದೆ ಕಮರಿ ಹೋಗುತ್ತಿವೆ. ರೆಡ್ಡಿಕಟ್ಟೆ ಭಾರೆ, ಕ್ಯಾಮೇನಹಳ್ಳಿ, ಬಿದಲೋಟಿ, ಪಣ್ಣೇನಹಳ್ಳಿ, ಬಿ.ಡಿ.ಪುರ ಮತ್ತಿತರ ಕಡೆಗಳಲ್ಲಿ ಕೆಲವು ರೈತರು ಶೇಂಗಾ ಹಾಗು ರಾಗಿ ಪೈರಿಗೆ ಕುಂಟೆ ಹಾಕುತ್ತಿದ್ದಾರೆ. ಇದರಿಂದ ಇರುವ ಫಸಲೂ ಸಹ ಒಣಗುವ ಹಂತ ತಲುಪಿದೆ. ಇನ್ನು ಕೆಲವರು ಮಳೆ ಬಂದಾಗ ಬಿತ್ತನೆ ಮಾಡೋಣವೆಂದು ಮಳೆಗಾಗಿ ಕಾಯುತ್ತಿದ್ದಾರೆ.
ಅನೇಕ ರೈತರು ಬೆಳೆ ಸಂಪೂರ್ಣವಾಗಿ ಹಾಳುತ್ತಿರುವುದನ್ನು ಗಮನಿಸಿ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಬೆಳೆ ವಿಮೆ ಮಾಡಿಸುವತ್ತ ಮುಂದಾಗುತ್ತಿದ್ದಾರೆ. ಇದೇ ರೀತಿ ಒಣ ಹವೆ ಮುಂದುವರಿದರೆ ಇಟ್ಟಿರುವ ಬೆಳೆ ಸಂಪೂರ್ಣ ನಾಶವಾಗುತ್ತದೆ. ಆಗೋಮ್ಮೆ ಮಳೆ ಬಂದರೆ ಮತ್ತೆ ಉಳುಮೆ ಮಾಡಿ ಉರುಳಿ, ಇಲ್ಲವೆ ರಾಗಿಯನ್ನು ಬಿತ್ತನೆ ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.ತೋವಿನಕೆರೆಯ ಸಿದ್ಧಗಂಗಣ್ಣ ಕುಟುಂಬ ರಾಗಿ ಫಸಲನ್ನು ಉಳಿಸಿಕೊಳ್ಳಲು ಟ್ಯಾಂಕರ್‌ನಲ್ಲಿ ನೀರು ತರಿಸಿ ಬಿಂದಿಗೆಯಲ್ಲಿ ಪೈರಿಗೆ ಹಾಕುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ